ಕಥನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಫೆಬ್ರವರಿ 12, 2015

ನೀಚತೆಯ ಪರಮಾವಧಿ

ಕತೆಯಲ್ಲ... ನೈಜ ಘಟನೆ...!!!
ಮುಂಬಯಿ ತಾ. 18/03/2014





ರೋಶನಿ ಹಾಗೂ ನಿಕೇತ್ ಹೊಸದಾಗಿ ಮದುವೆಯಾದ ನವ ದಂಪತಿಗಳು. ಸಾಮಾನ್ಯವಾಗಿ ಎಲ್ಲರಂತೆ ಮದುವೆಯ ಆರಂಭದ ರಸಮಯ ದಿನಗಳನ್ನು ಕಳೆಯುತ್ತಿದ್ದರು. ಬಹಳ ಪ್ರೀತಿಯಿಂದ ಹೊಸ ಸೊಸೆಯನ್ನು ನೋಡಿಕೊಳ್ಳುತ್ತಿದ್ದರು. ಅಷ್ಟೇ ಪ್ರೀತಿಯಿಂದ ಅತ್ತೆ, ಮಾವನನ್ನು ನೋಡಿ ಕೊಳ್ಳುತ್ತಿದ್ದಳು. ಇವರ ಸಂಸಾರದ ದೊಣಿ ನಗು ನಗುತ್ತಾ ಸಾಗುತ್ತಿರುವಾಗ, ಆಕಾಶವೇ ಕಳಚಿ ಬಿಳುವಂತಹ ಘಟನೆ ನಡೆಯುತ್ತದೆ.

ಒಂದು ಮುಂಜಾನೆ ಮಾವನಾದ ಬಾಬುಲಾಲ್ ಒಂದು ಸಿಡಿ ಹಾಗೂ ಪತ್ರವನ್ನು ತನ್ನ ಮಗ ಹಾಗೂ ಸೊಸೆಗೆ ತೋರಿಸಿ ಬೊಬ್ಬಿಡಲಾರಂಭಿಸುತ್ತಾರೆ. ಆ ಪತ್ರದಲ್ಲಿ ಬರೆಯಲಾಗಿತ್ತು " ಈ ಸಿಡಿಯಲ್ಲಿ ನಿಮ್ಮ ಮಗ ಹಾಗೂ ಸೊಸೆಯ ರಸಮಯ ಕ್ಷಣಗಳ ವಿಡಿಯೊ ಇದೆ. ಈ ವಿಡಿಯೊ ರಹಸ್ಯವಾಗಿರ ಬೇಕಾದರೆ 3 ದಿನದೊಳಗೆ 10 ಲಕ್ಷ ರೂಪಾಯಿ ಕೊಡ ಬೇಕು. ಇಲ್ಲಾಂದ್ರೆ ಇದನ್ನು ಇನ್ಟರ್ನೆಟ್ ನಲ್ಲಿ ಹಾಕಲಾಗುವುದು. ಹಣ ಎಲ್ಲಿಗೆ ತಲುಪಿಸಬೇಕೆಂಬ ಮಾಹಿತಿ 3 ದಿನದ ನಂತರ ತಿಳಿಸಲಾಗುವುದು." ಇದನ್ನು ಕೇಳಿ ಎಲ್ಲರೂ ದಂಗಾಗುತ್ತಾರೆ. ಇಷ್ಟು ದೊಡ್ಡ ಮೊತ್ತವನ್ನು ನಮ್ಮಿಂದ ಹೊಂದಿಸಲು ಸಾಧ್ಯವಿಲ್ಲ. ನಿಮ್ಮ ಖಾಸಗಿ ಕ್ಷಣಗಳನ್ನು ಜಾಗ್ರತೆಯಿಂದ ಕಳೆಯಬೇಕೆಂಬ ಸ್ವಲ್ಪ ಬುಧ್ಧಿ ಇಲ್ಲವೆ ನಿಮಗೆ ? ಈ ಮೊತ್ತವನ್ನು ನೀವೆ ಪತಿ ಪತ್ನಿ ಹೊಂದಿಸಿ ಕೊಳ್ಳಿ ಎಂದು ಹೇಳಿ ಹೊರಟು ಹೋಗುತ್ತಾರೆ. ಪತಿಯು ಇಷ್ಟು ದೊಡ್ಡ ಮೊತ್ತ ನನ್ನಿಂದ ಸಾಧ್ಯವಿಲ್ಲ. ಪೋಲಿಸಿಗೆ ದೂರು ಕೊಟ್ಟರೆ ನಮ್ಮ ಮಾನ ಮರ್ಯದೆಯೆಲ್ಲಾ ಹೊಗುತ್ತೆ. ನೀನೆ ಏನಾದರೂ ಮಾಡು ಎಂದು ನವ ಪತ್ನಿಯ ದುಂಬಾಲು ಬೀಳುತ್ತಾನೆ.

ಈ ಪರಿಸ್ಥಿತಿಯಲ್ಲಿ ರೋಶನಿ, ಇಂತಹ ನೀಚ ಕ್ರುತ್ಯವನ್ನು ಯಾರು ಮಾಡಲು ಸಾಧ್ಯ ಎಂದು ಯೋಚಿಸುತ್ತಿರುವಾಗಲೆ, ತನ್ನ ಹಳೇಯ ಪ್ರೇಮಿ ಮಹೇಂದ್ರನ ಚಿತ್ರ ಅವಳ ಮನಸ್ಸಿನ ಮುಂದೆ ಹಾದು ಹೋಗುತ್ತದೆ. ಆ ಕೂಡಲೇ ತನ್ನ ತವರು ಮನೆಗೆ ಹೋಗಿ "ನನಗೆ ಈಗಲೇ 10 ಲಕ್ಷ ರೂಪಾಯಿಯ ಅಗತ್ಯವಿದೆ. ಏಕೆ ಎಂದು ಕೇಳ ಬೇಡಿ. ನಿಮಗೂ ನಿಮ್ಮ ಮಗಳ ಮೇಲೆ ಪ್ರೀತಿಯಿದೆ ಎಂದು ಭಾವಿಸಿ ಕೇಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ ಎಂದು ಅಂಗಲಾಚುತ್ತಾಳೆ. ಆಗ ತಂದೆ ಕೇಳುತ್ತಾರೆ " ಏನಾಯಿತು? ಪತಿ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಾರೆಯೆ?" ಅದಕ್ಕವಳು "ಇಲ್ಲಾ.. ನನಗೆ ಬೇರೆಯದೆ ಅಗತ್ಯವಿದೆ." ಅದಕ್ಕವರು ಮರು ಮಾತನಾಡದೆ ಸದ್ಧ್ಯಕ್ಕೆ 5 ಲಕ್ಷ ರೂಪಾಯಿಯನ್ನು ಮಗಳಿಗೆ ಕೊಡುತ್ತಾರೆ.

ಆ ಹಣವನ್ನು ಸಂಶಯದ ಮೇಲೆ, ನೇರ ತನ್ನ ಹಳೇಯ ಪ್ರೇಮಿಯ ಮನೆಗೆ ಹೊಗುತ್ತಾಳೆ. ಮನೆ ಬಾಗಿಲಿನಲ್ಲಿ ರೋಶನಿಯನ್ನು ಕಂಡು, ಬಾಗಿಲು ಹಾಕಿ ಒಳಗೆ ಬಂದು, ರೋಶನಿಯ ಫೊಟೊಗಳನ್ನು ಚೊಕ್ಕದಾಗಿ ಗೋಡೆಯ ಮೇಲೆ ತೂಗು ಹಾಕಿರುತ್ತಾನೆ. ಅದರ ಮೇಲೆ ಅವಳಿಗೆ ತಿಳಿಯಬಾರದೆಂಬ ಉದ್ಧೇಶದಿಂದ ಒಂದು ಬಟ್ಟೆ ಹಾಕಿ ಮುಚ್ಚಿ,ನಂತರ ರೋಶನಿಯನ್ನು ಬರ ಮಾಡಿ ಕೊಳ್ಳುತ್ತಾನೆ. ಒಳಗೆ ಬಂದವಳೇ ಸಿಟ್ಟಿನಿಂದ " ಯಾಕೋ ಇಂತಹ ನೀಚ ಕೆಲಸ ಮಾಡುತ್ತಿದ್ದಿಯಾ? ನನ್ನ ಖಾಸಗಿ ಕ್ಷಣವನ್ನು ಚಿತ್ರಿಕರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿಯಾ ? ತಗೋ 5 ಲಕ್ಷ ಇದೆ. ಬಾಕಿ ಹಣ ಸ್ವಲ್ಪ ದಿನದಲ್ಲೇ ಕೊಡುವೆ" ಎಂದು ರೇಗುತ್ತಾಳೆ. ಆಗ ಅವನು ಶಾಂತವಾಗಿ ಹೇಳುತ್ತಾನೆ " ನಾನು ನಿನ್ನನ್ನು ಕೇವಲ ಪ್ರೀತಿದ್ದಲ್ಲ,ಬದಲಾಗಿ ನಿಶ್ಕಲ್ಮಶವಾಗಿ ಪೂಜಿಸಿದ್ದೇನೆ. ನಂಬಿಕೆ ಇಲ್ಲದ್ದಿದ್ದರೆ,ಇಗೋ ನೋಡು" ಎಂದು ಅವಳ ಫೊಟೊಗಳ ಮೇಲೆ ಹಾಕಿದ್ದ ಬಟ್ಟೆ ಸರಿಸಿ ತೋರಿಸುತ್ತಾನೆ. ಅದನ್ನು ಕಂಡು ಕಣ್ಣೀರಿನೊಂದಿಗೆ. ಮತ್ಯಾರು ಈ ಕೆಲಸ ಮಾಡಿರ ಬಹುದು ಎಂದು ಯೋಚಿಸುತ್ತಿರುವಾಗ .... ಮಹೇಂದ್ರ ಕೇಳುತ್ತಾನೆ... ಆ ಸಿಡಿ ಮೊದಲು ಯಾರ ಕೈಗೆ ಸಿಕ್ಕಿದ್ದು ? ನಂತರ ಏನಾಯಿತು ಎಂದು ಒಂದರ ನಂತರ ಒಂದು ಪ್ರೆಶ್ನಿಸುತ್ತಾನೆ... ನಂತರ ಪೂರ್ತಿ ವಿಷಯ ಅವಳಿಂದ ಕೇಳಿಸಿ ಕೊಂಡು, ಇಬ್ಬರೂ ಸೇರಿ ಒಂದು ಪ್ಲ್ಯಾನ್ ಮಾಡಿ. ಆ ಹಣವನ್ನು ಕೊಟ್ಟು ಅತ್ತೆ ಮನೆಗೆ ಕಳುಹಿಸಿ ಕೊಡುತ್ತಾನೆ.

ಮನೆಗೆ ಬಂದವಳೇ... ಕೇವಲ 5 ಲಕ್ಷ ಮಾತ್ರ ಹೊಂದಿಸಲು ಸಾಧ್ಯವಾಯಿತು ಎನ್ನುವಾಗ ಆಕೆಯ ಪತಿ " ಇನ್ನುಳಿದ 5 ಲಕ್ಷಕ್ಕೆ ಏನು ಮಾಡುವುದು ಎಂದು ಬೊಬ್ಬಿಡಾಲಾರಂಭಿಸುತ್ತಾನೆ. ಆಗ ಮಾವ ಸಮಾಧಾನಿಸುತ್ತಾ ಹೇಳುತ್ತಾನೆ " ಪರ್ವಾಗಿಲ್ಲಾ ಸಧ್ಯಕ್ಕೆ 5 ಲಕ್ಷ ಕೊಟ್ಟು ಸ್ವಲ್ಪ ಕಾಲಾವಕಾಶ ಕೇಳೊಣ" ಎಂದು ಆಗ ರೋಶನಿ ಸಿಟ್ಟಿನಿಂದ ಅಲ್ಲಿದ್ದ ಸಿಡಿ ಹಾಗೂ ಗಂಡನ ಲ್ಯಾಪ್ ಟಾಪ್ ನೆಲಕ್ಕೆ ಬಡಿದು ಪುಡಿಗಟ್ಟುತ್ತಾಳೆ. ಅದನ್ನು ನೋಡಿ ಸಿಟ್ಟಾದ ಗಂಡನನ್ನು ಮಾವನು ಸಮಾಧಾನಿಸುತ್ತಾನೆ.
ಅದೇ ದಿನ ರಾತ್ರಿ ನಿಕೇತ್ ತನ್ನ ಪತ್ನಿಯಲ್ಲಿ ಮಿಲನಕ್ಕಾಗಿ ಅಪೇಕ್ಷಿಸುತ್ತಾನೆ. ಆದರೆ ಅವಳು "ಇವತ್ತು ನನ್ನ ಮೂಡ್ ಸರಿ ಇಲ್ಲ... ದಯವಿಟ್ಟು ಕ್ಷಮಿಸಿ" ಎಂದು ಶೌಚಾಲಯಕ್ಕೆ ಹೊದಾಗ... ನಿಕೇತ್ ಕಿಟಕಿಯ ಬಳಿ ಬಂದು "ಇವತ್ತು ಮೂಡ್ ಇಲ್ವಂತೆ. ಇವತ್ತು ಯಾವುದೇ ಸಂಭವ ಕಾಣುತ್ತಿಲ್ಲ" ಎಂದಾಗ ಆ ಕಡೆಯಿಂದ "ಮೂಡ್ ಇಲ್ಲಾಂದ್ರೆ, ಮೂಡ್ ಬರಿಸೊ. ವಿಡಿಯೊವಿದ್ದ ಲ್ಯಾಪ್ ಟಾಪ್ ಬೇರೆ ಪುಡಿ ಮಾಡಿದ್ದಾಳೆ. ಒಂದಾದ್ರೂ ವಿಡಿಯೋದ ಈಗ ತುರ್ತು ಅಗತ್ಯವಿದೆ." ಎಂಬ ಮಾತುಕತೆ ನಡೆಯುವಾಗ, ರೋಶನಿ ಶೌಚಾಲಯದಿಂದ ಚಪ್ಪಾಳೆ ತಟ್ಟುತ್ತಾ ಹೊರಗೆ ಬಂದು "ಅಯ್ಯೋ ನೀಚರೇ ಹಣಕ್ಕಾಗಿ ಗಂಡ ಹಾಗೂ ಅತ್ತೆ ಮಾವ ಸೇರಿ ಇಂತಹ ನೀಚ ಕೆಲಸ ಮಾಡಬಹುದು ಎಂದು ಯೋಚಿಸಿರಲಿಲ್ಲ" ಎಂದು ಹೇಳಿದಾಗ ತಮ್ಮ ದುಷ್ಕ್ರುತ್ಯ ಬಯಲಾದಾಗ ಅತ್ತೆ ಮಾವ ಇಬ್ಬರೂ ಅವಳ ಕೋಣೆಗೆ ಓಡಿ ಬಂದು "ಮಗನೆ ಅವಳನ್ನು ಬಿಡ ಬೇಡ, ನಮ್ಮ ರಹಸ್ಯ ಅವಳಿಗೆ ತಿಳಿದಾಯಿತು. ಈಗ ಅವಶ್ಯವಾಗಿ ವಿಡಿಯೋದ ಅಗತ್ಯವಿದೆ ಎಂದು ಬಲವಂತದಿಂದ ಅವಳ ಬಲತ್ಕಾರಗೊಳಿಸುವ ಚಿತ್ರಿಕರಣ ನಡೆಸಲಾರಂಭಿಸುತ್ತಾರೆ. ಇದೇ ಸಮಯದಲ್ಲಿ ಅವಳ ಹಳೇಯ ಪ್ರೇಮಿ ಮಹೇಂದ್ರ ಇದೆಲ್ಲವನ್ನು ತನ್ನ ವಿಡಿಯೋ ಕ್ಯಾಮೆರಾದಲ್ಲಿ ಚಿತ್ರಿಸಿ ಜೋರಾಗಿ ಬಾಗಿಲ ಗಂಟೆ ಬಾರಿಸಿ, ಚಿತ್ರೀಕರಿಸಿದ ಸಿಡಿಯನ್ನು ಬಾಗಿಲಲ್ಲಿ ಬಿಟ್ಟು ಮೊದಲೇ ವಿಷಯ ತಿಳಿಸಿಟ್ಟಿದ್ದ ಪೋಲಿಸರನ್ನು ಕರೆ ತರಲು ಓಡುತ್ತಾನೆ. ಬಾಗಿಲಲ್ಲಿ ಗಂಟೆ ಬಾರಿಸಿದವರಾರು ಇರಲಿಲ್ಲ ಬದಲಾಗಿ ಅಲ್ಲಿ ಬಿದ್ದಿರುವ ಸಿಡಿಯನ್ನು ಎತ್ತಿ ಮಗನಲ್ಲಿ ಈ ಸಿಡಿ ಇತ್ತು ಬಾಗಿಲಲ್ಲಿ. ಏನಿದೆ ನೋಡುವ ಎಂದು ನೋಡಿದಾಗ ತಮ್ಮದೇ ದುಶ್ಕ್ರುತ್ಯ ನೋಡಿ ದಂಗಾಗಿ. ಇದು ನಿನ್ನದೇ ಕೆಲಸವಲ್ಲವೇ ಎಂದು ಅವಳನ್ನು ಕತ್ತು ಹಿಚುಕಿ ಕೊಲ್ಲಲು ಮುಂದಾಗುತ್ತಾರೆ. ಅದೇ ಸಮಯಕ್ಕೆ ಮಹೇಂದ್ರ ಪೋಲಿಸರನ್ನು ಕರೆದು ಕೊಂಡು ಸಕಾಲಕ್ಕೆ ಬಂದು ಅವಳನ್ನು ರಕ್ಷಿಸಿ ಆ ಮೂವರನ್ನು ಬಂಧಿಸುತ್ತಾರೆ.

ರೋಶನಿಯ ಗಂಡ, ಅತ್ತೆ ಹಾಗೂ ಮಾವನಿಗೆ ಮುಂಬಯಿ ನ್ಯಾಲಯವು ವಿಧಿಸಿದ ಶಿಕ್ಷೆ ಹಾಗೂ IPC ಸಂಖ್ಯೆಯನ್ನು ಈ ಕೆಳಗೆ ನೀಡಲಾಗಿದೆ.ಬಲವಂತ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕಾಗಿ ಹಾಗೂ ಅಪರಾಧಿಕ ಷಡ್ಯಂತ್ರಕ್ಕಾಗಿ... ಸೆಕ್ಶನ್498A, 339C, 120B ಯಂತೆ 7 ವರ್ಷಗಳ ಕಠಿನ ಸಜೆ ವಿಧಿಸಲಾಯಿತು.

ಮಾನವನು ಇಷ್ಟೊಂದು ನೀಚನಾಗಿರ ಬಹುದೇ ಎಂಬ ಪ್ರೆಶ್ನೆ ನಿಮ್ಮಲ್ಲೂ ಉಧ್ಭವಿಸುತ್ತಿರ ಬಹುದಲ್ಲವೇ...? ಹೌದು ಇದ್ದಾರೆ ... ನಮ್ಮ ಸಮಾಜದಲ್ಲಿ ಇನ್ನೂ ಕೂಡ ಕೆಲವರು ಹೆಣ್ಣನ್ನು ಕೇವಲ ಹಣ ಗಳಿಸುವ ಯಂತ್ರ ಎಂದು ಭಾವಿಸಿದ್ದಾರೆ. ತಮ್ಮ ದುರಾಸೆಗಾಗಿ ಯಾವ ರೀತಿಯಲ್ಲಾದರೂ ಉಪಯೊಗಿಸಲು ನಾಚುವುದಿಲ್ಲ.

ನಾವು ನಮ್ಮ ಸ್ವಂತಕ್ಕಾಗಿ ಏನಾದರೂ ಖರೀದಿಸುವಾಗ,ಆ ವಸ್ತುವನ್ನು ಸರಿಯಾಗಿ ಪರೀಕ್ಷಿಸಿ ನಂತರ ಖರೀದಿಸುತ್ತೆವೆ... ಆದರೆ ತಮ್ಮ ಮುದ್ದಿನ ಮಗಳು ಮದುವೆಯ ವಯಸ್ಸಿಗೆ ಬಂದಾಗ ಅದೇ ಮುದ್ದಿನ ಮಗಳು ತಲೆಯ ಭಾರವಾಗ ತೊಡಗುತ್ತಾಳೆ. ಯಾರಿಗಾದರೂ ತಲೆಗೆ ಕಟ್ಟಿ ಕೊಡಲು ತುದಿಗಾಲಲ್ಲಿ ಇರುತ್ತಾರೆ. ಹುಡುಗನ ಪೂರ್ವಪರ ಪರಿಶೀಲಿಸದೆ ತಲೆಯ ಭಾರವನ್ನು ಇಳಿಸುವ ಆತುರದಲ್ಲಿರುತ್ತಾರೆ. ನಂತರ ಅನುಭವಿಸುವುದು ಆ ಹೆಣ್ಣು ಜೀವ ಮಾತ್ರ…!!!

# ತಲೆಯ ಭಾರ ಇಳಿಸುವ ಆತುರದಲ್ಲಿ ಆ ಬಡ ಜೀವವನ್ನು ಯಾಕೆ ಕೈಗೊಂಬೆಯಾಗಿಸುತ್ತೀರ...???
# ಅದೇ ರೀತಿ ಮನೆಗೆ ಬಂದ ಸೊಸೆಯನ್ನು ಅಷ್ಟೊಂದು ಕ್ರೂರವಾಗಿ ಯಾಕಾಗಿ ಹಿಂಸಿಸುತ್ತೀರ...???
# ನೀವು ಪ್ರಾಣಿಗಿಂತಲೂ ಕಡೆಯಾಗಿದ್ದೀರಾ...???
# ವರದಕ್ಷಿಣೆಗೆ ಒತ್ತಾಯಿಸಿದರೆ, ಕೇಸು, ಕೋರ್ಟು ಅಂತ ಅಲೆಯ ಬೇಕಾದಿತು ಎಂದು ಈ ರೀತಿ ಸುಲಭವಾಗಿ ಹಣ ಮಾಡುವ ದುರಾಲೊಚನೆಯೆ...???

# ನಿಮ್ಮಂತವರಿಗೆ ನನ್ನ ಸಾವಿರ ಧಿಕ್ಕಾರವಿದೆ...!!!
ನಿಮ್ಮವನೇ ಆದ
-ಮುಖ್ತಾರ್ ಉಚ್ಚಿಲ

ದೆಹಲಿ ಅನುಭವ




ಗೆಳೆಯರೇ...

ಕೆಲಸದ ನಿಮಿತ್ತ ತುರ್ತಾಗಿ ದೆಹೆಲಿಗೆ ಹೋಗಬೇಕಾಗಿ ಬಂದ್ದಿದ್ದರಿಂದ, ಓರ್ವ ಗೆಳೆಯನಜೊತೆಗೂಡಿ, ಸಮಯದ ಅಭಾವದ ಕಾರಣಮಂಗಳೂರಿನಿಂದ ದೆಹಲಿಗೆ ವಿಮಾನವೇರಿದೆ. ನನ್ನದೆಹಲಿ ಪ್ರಯಾಣದಲ್ಲಾದ ಕೆಲವು ಅನುಭವಗಳನ್ನುತಮ್ಮ ಮುಂದಿಡುತ್ತಿದ್ದೆನೆ.
ಮಂಗಳೂರಿನಿಂದ ಮುಂಬಯಿ ಮುಖಾಂತರಮಧ್ಯ ರಾತ್ರಿಗೆ ದೆಹಲಿ ಪ್ರಾದೇಶಿಕ ವಿಮಾನನಿಲ್ದಾಣದಲ್ಲಿ ಇಳಿದು ಹೊರಗೆ ಬಂದಾಗ ನೂರಾರುಬಾಡಿಗೆ ಕಾರುಗಳು ನಮಗೆದುರಾದವು. ಒಬ್ಬರನಂತರ ಒಬ್ಬರು ಟ್ಯಾಕ್ಸಿ ಬೇಕಾ ಎಂದು ಕೇಳತೊಡಗಿದರು. ಪಹಾಡ್ ಗಂಜ್ ಗೆ ಹೋಗಲು ಎಷ್ಟುಚಾರ್ಜ್ ಮಾಡುವಿರಿ ಎಂದು ಕೇಳಿದಾಗ, ನಮಗೆಸಿಕ್ಕಿದ ರೇಟ್ ಗಳನ್ನು ನೀವೇ ಗಮನಿಸಿ... ಒಬ್ಬರನಂತರ ಒಬ್ಬರು – 1500/-, 1200/-, 1000/-, 800/- ಕೊನೆಗೆ 700/- ರೂಪಾಯಿಗೆ ಬಂದು ನಿಂತಿತು.ಎಲ್ಲರ ರೇಟು ಕೇಳಿದ ನಂತರ, ನಿಲ್ದಾಣದಲ್ಲಿರುವ ಪ್ರೀಪೈಡ್ ಟ್ಯಾಕ್ಸಿಯಲ್ಲಿ ವಿಚಾರಿಸಿದಾಗ ಕೇವಲ 350/-ರೂಪಾಯಿ ಎಂದು ಉತ್ತರ ಸಿಕ್ಕಿತು. ಅದನ್ನೆ ನಿಗದಿಪಡಿಸಿ ಮುನ್ನಡೆದೆವು. ದಾರಿ ಮದ್ಯೆ ಕಾರಿನಚಾಲಕನಲ್ಲಿ, ಯಾವುದಾದರೂ 2000-2500/-ರೂಪಾಯಿ ಬೆಲೆಯ ಒಳ್ಳೆಯ ಹೋಟೆಲ್ಕೊಡಿಸುವಂತೆ ಕೇಳಿದೆವು. ಅವನು ಒಂದುಹೊಟೇಲಿಗೆ ಕರೆದು ಕೊಂಡು ಹೋದ, ನಮಗಿಂತಮೊದಲು ಒಳ ಹೊಕ್ಕು "ಸಾರ್ ಗೆ ರೂಮ್ ತೋರಿಸು"ಎಂದ. ರೇಟು ಎಷ್ಟು ಕೇಳಿದರೆ "ಮೊದಲು ರೂಮ್ನೋಡಿ, ಒಪ್ಪಿಗೆಯಾದರೆ ರೇಟು ತಿಳಿಸುವೆ" ಎಂದುರೂಮ್ ಬಾಯ್ ನೊಂದಿಗೆ ಕಳುಹಿಸಿದ. ರೂಮ್ಸಣ್ಣದಾಗಿದ್ದರೂ 2500/- ಬೇರೆ ವಿಧಿಯಿಲ್ಲದೆ ಒಪ್ಪಿದೆ.ನಮ್ಮ ಇನ್ನೋರ್ವ ಗೆಳೆಯ ದುಬಾಯಿ ಯಿಂದಬರುವವನಿದ್ದ ಕಾರಣ 2 ರೂಮ್ ಪಡೆದೆವು.

ಆದರೆ ನಂತರ ತಿಳಿಯಿತು ಆ ರೂಮ್ ಗೆಹೆಚ್ಚೆಂದರೆ 1000/- ರೂಪಾಯಿ ಕೊಡಬಹುದುಎಂದು. ನಮ್ಮನ್ನು ಕರೆದುಕೊಂಡು ಬಂದ ಟ್ಯಾಕ್ಸಿಡ್ರೈವರ್ ನಾವು ರೂಮ್ ನೋಡಲು ಒಳಗೆಹೋದಾಗ ಹೋಟೇಲಿನವನೊಂದಿಗೆ 2500/- ಹೇಳುಎಂದು ಫಿಕ್ಸಿಂಗ್ ಮಾಡಿ, ಬಾಕಿ ಹಣವನ್ನು ತನ್ನಜೇಬಿಗಿಳಿಸಿ ಹೋಗಿದ್ದ. ಸಾಮಾನ್ಯವಾಗಿ ನಾನುಯಾವಾಗಲೂ ದೂರದೂರಿಗೆ ಪ್ರಯಾಣ ಹೊರಡುವಾಗ Booking.com/app ನಲ್ಲಿ ನಿರ್ದಿಷ್ಟ ಸ್ಥಳದ ಹೋಟೆಲ್ ಗಳ ಬೆಲೆಯನ್ನು ಪರೀಕ್ಷಿಸಿಮುಂಗಡವಾಗಿ ಕಾಯ್ದಿರಿಸುತ್ತಿದ್ದೆ. ಆದರೆ ಈ ಸಲಸಮಯದ ಅಭಾವದ ಕಾರಣ ಪರೀಕ್ಷಿಸಲಾಗಲಿಲ್ಲ. ಆಸಂದರ್ಭದಲ್ಲಿ ನನಗೆ ಈ app ನ ಮಹತ್ವ ತಿಳಿಯಿತು.

ಮರುದಿನ ಮಧ್ಯಾನ್ಹ 1:30 ಕ್ಕೆ ಹೋಟೆಲ್ಬಿಡುವಾಗ 2 ರೂಮ್ 2 ದಿನದ ಬಾಡಿಗೆ ಕೇಳಿದ.ನಾವು ಕೇವಲ 13 ಗಂಟೆ ಮಾತ್ರ ಉಳಿದುಕೊಂಡದ್ದು,ಅದಕ್ಕೆ ಎರಡು ದಿನದ ಬಾಡಿಗೆ ಯಾಕೆ ಎಂದು ಕೇಳಿದೆ.ಅದಕ್ಕವನು "ನೀವು ಯಾವುದೇ ಸಮಯದಲ್ಲಿಬಂದರೂ ಮಧ್ಯಾನ್ಹ 12 ಗಂಟೆ ಮೊದಲು ರೂಮ್ಖಾಲಿ ಮಾಡ್ಬೆಕು. ಇಲ್ಲಂದ್ರೆ ಮರುದಿನದ ಬಾಡಿಗೆಕಡ್ಡಾಯ ಪಾವತಿಸ ಬೇಕು. ಆಗ ನಾನುBooking.com/app ನ ಮೊರೆ ಹೋದಾಗ ಅದೇಪರಿಸರದಲ್ಲಿ ಇನ್ನೊಂದು ಉತ್ತಮ ಹೋಟೆಲ್ಲಭಿಸಿದಾಗ ಅದನ್ನೇ ರಿಸರ್ವ್ ಮಾಡಿ, ಅಲ್ಲಿಂದನಿರ್ಗಮಿಸಿದೆವು. ನಮಗೆ ಲಭಿಸಿದ ಹೋಟೆಲ್ವಿಶಾಲವಾಗಿಯೂ, ಸ್ವಚ್ಚವಾಗಿತ್ತು. ನಾವು 3 ಜನರಿಗೆಉಳಿದು ಕೊಳ್ಳಲು ಬಾಡಿಗೆ ಕೇವಲ 2800/-ರೂಪಾಯಿ ಮಾತ್ರ – Thanks to Booking.com/app

ನಮ್ಮ ಉದ್ದೇಶಿತ ಕಾರ್ಯವು 3 ದಿನ ವಿಳಂಭವಾದ ಕಾರಣ ಮರುದಿನ ಜಗತ್ತಿನ 7 ನೇ ಅಧ್ಭುತವಾದ ಆಗ್ರಾದ "ತಾಜ್ ಮಹಲ್" ನೋಡಲು7000/- ಪಾವತಿಸಿ ಬಾಡಿಗೆ ಕಾರು ನಿಗದಿಪಡಿಸಿ ಮುಂಜಾನೆ 6 ಗಂಟೆಗೆ ಹೊರಟೆವು. 4 ಗಂಟೆಗಳ ಪ್ರಯಾಣವಾದ ಕಾರಣ, ದಾರಿ ಮದ್ಯೆ ಕಾರು ಚಾಲಕ ಕೇಳಿದ "ಸಾರ್ ಚಹ, ತಿಂಡಿಗಾಗಿ ಮುಂದೆ ಒಂದು ಧಾಭಾವಿದೆ" ಎಂದ. ಅದರಂತೆ ಧಾಭಾದ ಒಳಗೆ ಹೋಗಿ ತಿಂಡಿಗಳ ದರ ಪಟ್ಟಿ ನೋಡಿ ದಂಗಾದೆವು. ಒಂದು ಪ್ಲೇಟ್ ಪೂರಿಗೆ 125/-, ಕೇವಲ ಒಂದು ಪರೋಟಕ್ಕೆ 40/-, ಚಹ 50/- ರೂಪಾಯಿ. ಊರಿನಲ್ಲಿ15 ರೂಪಾಯಿಗೆ ಸಿಗುವ ಬಿಸ್ಕಿಟ್ ಗೆ 170/- ಮುಂದಿನ ಧಾಭಾದಲ್ಲಿ ಅದೇ ಬಿಸ್ಕಿಟ್ ಗೆ 50/- ರೂಪಾಯಿ ಕೊಟ್ಟು ಖರೀದಿಸಿ ಮುಂದುವರಿದು ಒಂದು ಕ್ಯಾಂಟೀನ್ ನಲ್ಲಿ ಚಹ ತಿಂಡಿ ಮುಗಿಸಿದೆವು.

ನಂತರ ಆಗ್ರಾ ತಲುಪಿದಾಗ ತಾಜ್ ಮಹಲ್ ನ ಗೇಟ್ ನಲ್ಲಿ ಸೈಕಲ್ ರಿಕ್ಷಾದವ ಹೇಳಿದ " ಸಾರ್ ಇದು ಸರಕಾರಿ ಪ್ರಾಯೊಜಿತ ಸೈಕಲ್. ತಾಜ್ ಮಹಲ್ ಬಳಿಗೆ ಬಿಡಲು ಕೇವಲ 40/- ರೂಪಾಯಿ ಮಾತ್ರ" ಒಮ್ಮೆ ಸೈಕಲ್ ರಿಕ್ಷಾ ಏರಿದ ಮೇಲೆ, ಅಲ್ಲಿಯ ಪರಿಸರದ ಬಗ್ಗೆ ವಿವರಿಸಲು ತೊಡಗಿದ. ಕೊನೆಗೆ "ಸಾರ್ ಇಲ್ಲಿ ಒಂದು ಸರಕಾರಿ ಬಟ್ಟೆ ಅಂಗಡಿ ಇದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸೀರೆಗಳು. ಬಿದಿರನ್ನು ಎಳೆ ಎಳೆಯಾಗಿ ಬಿಡಿಸಿ, ಅದರಿಂದ ತಯಾರಿಸಿದ ಸೀರೆಗಳು. ಬಾಳೆ ದಿಂಡಿನ ಎಳೆಗಳಿಂದ ತಯಾರಿಸಿದ ಸೀರೆಗಳು. ನಯವಾಗಿಯೂ, ಅತೀ ಹಗುರವಾದ, ಇಸ್ತ್ರಿ ಹಾಕುವ ಅಗತ್ಯವಿಲ್ಲದ ಸೀರೆಗಳು. ಜೈಲಿನಲ್ಲಿರುವ ಕೈದಿಗಳಿಂದ ತಯಾರಿಸಲ್ಪಡುತ್ತದೆ. 5 ವರ್ಷ ವಾರಂಟಿಯೂ ಇದೆ. ಅದೂ ಅಲ್ಲದೆ 3-4 ವರ್ಷ ಉಪಯೊಗಿಸಿದ ನಂತರ ಹಿಂತಿರುಗಿಸಿದರೆ ಅರ್ಧ ಹಣ ವಾಪಸ್ ನೀಡುತ್ತಾರೆ. ಬೆಂಗಳೂರಿನಲ್ಲಿ ಇವರ ಶಾಖೆಗೆ ಹಿಂತಿರುಗಿಸ ಬಹುದು. ಅಲ್ಲಿ ಒಂದು ದಪ್ಪವಾದ ಹಾಗೂ ಹತ್ತಿಗಿಂತ ಹಗುರವಾದ ಚಾದರ ಸಿಗುತ್ತದೆ. ಚಳಿಗಾಲದಲ್ಲಿಯೂ ಉಪಯೊಗಿಸಿ, ಸೆಖೆಗಾಲದಲ್ಲಿ ಅದನ್ನೆ ತಿರುಗಿಸಿ ಹೊದ್ದು ಕೊಂಡರೆ ತಂಪಾಗಿರಿಸುತ್ತದೆ." ಹೀಗೆ ಹೇಳುತ್ತಾ ನಾನು ನಿಮ್ಮನ್ನು ಮೊದಲು ಅಲ್ಲಿಗೆ ಕರೆದು ಕೊಂಡು ಹೋಗುವೆ, ನಂತರ ತಾಜ್ ಮಹಲ್ ಗೆ ಕರೆದು ಕೊಂಡು ಹೋಗುವೆ ಎಂದ. ಅವನ ಮಾತಿಗೊಪ್ಪಿ ಆ ಅಂಗಡಿಗೆ ಭೇಟಿ ನೀಡಿ ಬಾಳೆ ದಿಂಡಿನ ಮತ್ತು ಬಿದಿರಿನ ೨ ಸೀರೆ ಹಾಗು ಒಂದು ಚಾದರ ಖರೀದಿಸಿ ಸೈಕಲ್ ಹತ್ತಿ ಕುಳಿತು ಚಾಲಕನಿಗಾಗಿ ಕಾಯುತಿದ್ದೆವು. ಅವನು ನಮ್ಮ ವ್ಯಾಪಾರದ ಮೊತ್ತಕ್ಕನುಗುಣವಾಗಿ ಕಮಿಶನ್ ಪಡೆಯಲು ಹೊಗಿದ್ದ ಎಂದು ನಂತರ ತಿಳಿಯಿತು. ಅಲ್ಲಿಂದ ತಾಜ್ ಮಹಲ್ ಕಡೆಗೆ ಹೊರಟೆವು.

ಟೂರಿಸ್ಟ್ ಗೈಡ್ ನ ಸಹಾಯ ಪಡೆಯುವುದು ಬೇಡವೆಂದು ಮೊದಲು ನಿರ್ಧರಿಸಿದ್ದೆವು. ಆದರೆ ತಾಜ್ ಮಹಲ್ ಪ್ರವೇಶಕ್ಕೆ 400-500 ಜನ ಕ್ಯೂ ನಿಂತಿದ್ದರು. ಆಗ ಅಲ್ಲಿಗೆ ಬಂದ ಗೈಡ್ ನಮಗೆ ಹೇಳ ತೊಡಗಿದ "ಸಾರ್ ಹೀಗೆ ಹೋದರೆ ಟಿಕೆಟ್ ಸಿಗುವಾಗ ಸಂಜೆಯಾಗುತ್ತದೆ. ನಾನು ನಿಮ್ಮನ್ನು ಕಾಯಿಸದೆ 5ನಿಮಿಷದಲ್ಲಿ VIP ಗೇಟ್ ಮುಖಾಂತರ ಒಳಗೆ ಕರೆದು ಕೊಂಡು ಹೋಗುವೆ. ನಿಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿ ಕೊಳ್ಳುವೆ. ಕೇವಲ450/- ರೂ ಕೊಡಿ ಎಂದ. ಅಲ್ಲಿರುವ ಕ್ಯೂ ನೋಡಿ ಅವನ ಮಾತಿನ ಮೇಲೆ ನಂಬಿಕೆ ಇರಲಿಲ್ಲ. ಆದರೂ ವಿಧಿಯಿಲ್ಲದೆ ಒಪ್ಪಿದೆವು. ಅವನು ತನ್ನ ಮಾತಿನಂತೆ ನಮ್ಮನ್ನು ಇಕ್ಕಟ್ಟಾದ ಓಣಿಗಳಲ್ಲಿ ಕರೆದು ಕೊಂಡು ಹೋಗಿ ಟಿಕೇಟ್ ಪಡೆದು 5 ನಿಮಿಷದಲ್ಲಿ ಹೊರಗಿನVIP ಗೇಟ್ ಮುಖಾಂತರ ಪ್ರವೇಶಿಸುವಂತೆ ಮಾಡಿದ. ಪರಿಸರವನ್ನು ಸುತ್ತಾಡಿಕೊಂಡು ತಾಜ್ ಮಹಲ್ ನ ಒಳಗೆ ಹೋಗಲು ಇನ್ನಷ್ಟು (100-150 ಜನರ) ಕ್ಯೂ ಇತ್ತು. ಆಗ "ಚಿಂತೆ ಮಾಡಬೇಡಿ, ಎರಡೇ ನಿಮಿಷದಲ್ಲಿ ನಾವು ಒಳಗೆ ಹೋಗುವಂತೆ ಮಾಡುವೆ" ಎಂದವನೇ ಸರತಿಯ ಸಾಲನ್ನು ದಾಟಿಸಿ, ತಟ್ಟನೆ ಒಳಗೆ ಹೊಗಲು ಅನುವು ಮಾಡಿ ಕೊಟ್ಟು, ಸವಿವರವಾಗಿ ಮಾಹಿತಿ ನೀಡಿದ ನಂತರ ಗೇಟ್ ನ ಹೊರಗಡೆ ನಮ್ಮ ಸೈಕಲ್ ರಿಕ್ಶಾದ ಬಳಿಗೆ ಬಿಟ್ಟ. ಅಲ್ಲಿಂದ ದೆಹಲಿಯ ನಮ್ಮ ಹೋಟೆಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಗೈಡ್ ನಿಂದಾಗಿ ನಮ್ಮ ಕೆಲಸ ತುಂಬಾನೆ ಸುಲಭವಾಯಿತು.

ದೆಹಲಿಗೆ (ಇತರ ಊರಿಗೂ ಅನ್ವಯ) ಪ್ರಯಾಣಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಿ.

· ಚಳಿಗಾಲದ ಸಮಯದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಥವ ಹತ್ತುವಾಗ ಸಾಧ್ಯವಾದಷ್ಟು 10 am ಗಂಟೆಯ ನಂತರದ ವಿಮಾನಗಳೊಂದಿಗೆ ವ್ಯವಹರಿಸಿ.ಏಕೆಂದರೆ,ಮಧ್ಯರಾತ್ರಿಯಿಂದ ಬೆಳ್ಳಗಿನವರೆಗೆ ದಟ್ಟವಾದ ಮಂಜು ಆವರಿಸಿರುವ ಕಾರಣ ವಿಮಾನ ವಿಳಂಬ(ಆಗುತ್ತದೆ)ವಾಗುವ ಸಾಧ್ಯತೆಗಳಿರುತ್ತವೆ.
· ಟ್ಯಾಕ್ಸಿಯನ್ನು ಪ್ರೀ ಪೈಡ್ ಕೌಂಟರ್ ನಿಂದಲೇ ಕಾಯ್ದಿರಿಸಿಕೊಳ್ಳಿ.
· ಹೋಟೆಲ್ ಕಾಯ್ದಿರಿಸಲು ಕೆಲವೊಂದು ಆಪ್ಲಿಕೆಶನ್ ಗಳು ಸ್ಮಾರ್ಟ್ ಫೊನ್ ಗಳಲ್ಲಿ ಲಭ್ಯವಿದೆ. ಹಾಗಾಗಿ ಪ್ರಯಾಣ ಹೊರಡುವ ಮೊದಲೇ ಅಂತಹ ಆಪ್ಲಿಕೆಶನ್ ಸಹಾಯದಿಂದ ತಮ್ಮ ಹೋಟೆಲ್ ಕೋಣೆಯನ್ನು ಕಾಯ್ದಿರಿಸಿಕೊಳ್ಳಿ. ಇಲ್ಲಾಂದ್ರೆ ದುಪಟ್ಟ ಹಣ ಕೊಡ ಬೇಕಾಗಿ ಬರಬಹುದು.
· ಕೆಲವು ಹೋಟೆಲ್ ಗಳಲ್ಲಿ ನೀವು ಪ್ರವೆಶಿಸಿದ ಕ್ಷಣದಿಂದ ನಿಮ್ಮ ಸಮಯ ಶುರುವಾಗಿ ಮರುದಿನ ಅದೇ ಸಮಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಕೆಲವು ಹೋಟೆಲ್ ಗಳಲ್ಲಿ 12pm ಗೆ ಕೋಣೆ ಬಿಡ ಬೇಕಾಗಿದೆ. ಅದರ ನಂತರ ಅರ್ಧ ಗಂಟೆ ಕಳೆದರೂ ಮರು ದಿನದ ಬಾಡಿಗೆಯನ್ನು ಪಾವತಿಸ ಬೇಕಾಗುತ್ತದೆ. ಹಾಗಾಗಿ ಇದನ್ನು ಮೊದಲೇ ಹೋಟೆಲ್ ನವರಿಂದ ಕೇಳಿ ತಿಳಿದು ಕೊಳ್ಳಿ.
· ತಾಜ್ ಮಹಲ್ ನಲ್ಲಿ ಗೈಡ್ ಪಡಕೊಂಡ್ರೆ ಒಳ್ಳೆದು. (ಅನುಭವದ ಮಾತು)
· ಚಳಿಗಾಲದಲ್ಲಿ ಹವಾಮಾನ 4 ಡಿಗ್ರಿಯವರೆಗೆ ಇಳಿಯುತ್ತದೆ. ಹಾಗಾಗಿ ಅದಕ್ಕೆ ತಕ್ಕುದಾದ ಬಟ್ಟೆ,ಕಾಲು ಚೀಲ, ಕೈ ಚೀಲ ಇತ್ಯಾದಿಗಳೊಂದಿಗೆ ಪ್ರಯಾಣಿಸಿ.
ದೆಹಲಿ ಪ್ರಯಾಣದಲ್ಲಿ ನನಗಾದ ಅನುಭವ ಹಾಗೂ ಪ್ರಯಾಣಿಕರಿಗೆ ಉಪಯೋಗವಾಗಲಿ ಎಂಬುದು ಈ ಲೇಖನ ಬರೆಯುವ ಉದ್ದೇಶ. ಹಾಗಾಗಿ ಈ ಲೇಖನ ಉಪಯುಕ್ತವಾಗಿದೆ ಎಂಬ ವಿಶ್ವಾಸದೊಂದಿಗೆ
ನಿಮ್ಮವನೇ ಆದ
ಅನಾಮಿಕ...

ಸಾವಧಾನರಾಗಿರಿ, ಸುರಕ್ಷಿತರಾಗಿರಿ


ತಾರೀಖು 20/5/2012. ಪಂಜಾಬ್ ನ ಲುಧಿಯಾನದಿಂದ ನವ ವಿವಾಹಿತರಾದ ರಾಜ್ ಮತ್ತು ಪೂಜ ತಮ್ಮ ಮಧುಚಂದ್ರಕ್ಕಾಗಿ ದಿಲ್ಲಿಯ ರೆಸಾರ್ಟ್ ಒಂದಕ್ಕೆ ಪ್ರಯಾಣ ಬೆಳೆಸುತ್ತಾರೆ. ತಾವು ಪ್ರಯಾಣಿಸುತ್ತಿರುವ ವ್ಯಾನ್ ನಲ್ಲಿ ರಾಧ ಎಂಬ ಹುಡುಗಿಯು ಇರುತ್ತಾಳೆ. ಎಲ್ಲರೂ ರೆಸಾರ್ಟ್ ತಲುಪಿ ಈಜುಕೊಳದಲ್ಲಿ ಮೊಜಿನಲ್ಲಿ ಮುಳುಗುತ್ತಾರೆ. ಅದೇ ಸಂಧರ್ಭದಲ್ಲಿ ಸುಸಂಧರ್ಭ ನೋಡಿ ರಾಧ, ರಾಜ್ ನನ್ನು ಭೇಟಿಯಾಗುತ್ತಾಳೆ.ಇದನ್ನು ರಾಜ್ ನ ಪತ್ನಿ ದೂರದಿಂದ ಗಮನಿಸಿ ನಂತರ ಕೋಣೆಗೆ ಬಂದಾಗ ಕೇಳುತ್ತಾಳೆ "ಯಾರು ಆ ಹುಡುಗಿ? ಏನು ಮಾತನಾಡಿದಳು?" ಎಂದು. ಅದಕ್ಕೆ ರಾಜ್ ಏನೂ ಆಗದವನಂತೆ "ಏನಿಲ್ಲ ಡಾರ್ಲಿಂಗ್, ಪರಸ್ಪರ ಪರಿಚಯ ಮಾಡಿಕೊಂಡೆವು" ಎಂದು.
ರಾಜ್ ಓರ್ವ ಪರ್ತ್ರಕರ್ತನಾಗಿದ್ದ. ನಂತರ ಇವರಿಬ್ಬರೂ (ರಾಜ್ ಹಾಗೂ ರಾಧಾ) ಪರಸ್ಪರ ಓರೆ ಕಣ್ಣಿನಿಂದ ನೋಡುವುದು,ಪರಸ್ಪರ ಕಣ್ಸನ್ನೆ, ಸಂಶಯದಿಂದ ವರ್ತಿಸುವುದು ಎಲ್ಲಾ ನಡೆಯುತಿತ್ತು. ದಿನದ ಹೊತ್ತಿನಲ್ಲಿ ಹೊರಾಂಗಣದ ಮೊಜಿನ ಸಮಯದಲ್ಲೂ ತನ್ನ ನವ ಪತ್ನಿಯನ್ನು ಹೇಳದೆ ಕೇಳದೆ ಮಾಯವಾಗುತಿದ್ದ. ಆ ಸಮಯದಲ್ಲೂ ರಾಧಾ ಕೂಡ ಅಲ್ಲಿರುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಪ್ರತ್ಯಕ್ಶವಾಗುತಿದ್ದ. ನಂತರ ರಾಧಾ ಕೂಡ ಪ್ರತ್ಯಕ್ಷವಾಗುತಿದ್ದಳು. ಹಾಗೂ ರಾತ್ರಿ ಹೊತ್ತು ತನ್ನ ಲ್ಯಾಪ್ಟಾಪ್ ನಲ್ಲಿ ಏನೋ ಮಾಡುತಿದ್ದ. ಇದೇ ರೀತಿ ನಡೆಯುತ್ತಿರುವಾಗ ಪತ್ನಿ ಪೂಜ ತನ್ನ ಸಹನೆ ಮುರಿದು ಕೇಳುತ್ತಾಳೆ. ಆಗಲೂ ಹೇಳುತ್ತಾನೆ "ಡಾರ್ಲಿಂಗ್, ತಪ್ಪು ತಿಳಿಯಬೇಡ. ಒಂದು ಮುಖ್ಯವಾದ ಕೆಲಸ ಮಾಡುತ್ತಿದ್ದೆನೆ. ಮನೆಗೆ ಮರಳಿದ ನಂತರ ಸವಿವರವಾಗಿ ತಿಳಿಸುವೆ" ಎಂದು. ಹಾಗಾದರೆ ನಾಳೇನೆ ನಮ್ಮ ಮಧುಚಂದ್ರ ಬಿಟ್ಟು ಊರಿಗೆ ಹೊರಡುವ ಎಂದು ಹಟ ಹಿಡಿಯುತ್ತಾಳೆ. ಆಗ ರಾಜ್ "ಡಾರ್ಲಿಂಗ್ ಇನ್ನು ಎರಡು ದಿನ ನನಗೆ ಕೊಡು. ನಂತರ ನಿನ್ನ ಬಿಟ್ಟು ಎಲ್ಲೂ ಹೊಗಲ್ಲ, ರಾತ್ರಿ ತುಂಬಾ ಆಯಿತು. ಈಗ ಮಲಗು. ಬೆಳಿಗ್ಗೆ ಮಾತನಾಡುವ" ಎಂದು ಸಮಾಧಾನ ಪಡಿಸುತ್ತಾನೆ. ತಡರಾತ್ರಿ ತನ್ನ ಮೊಬೈಲ್ಗೆ ಬಂದ ರಾಧಾಳ SMS ಓದಿ, ಪತ್ನಿಗೆ ಅರಿಯದಂತೆ ಹೊರಟು ಬಿಡುತ್ತಾನೆ. ಪೂಜ ಬೆಳಗೆದ್ದು ನೊಡುವಾಗ ರಾಜ್ ನ ಮ್ರುತದೇಹ ರೆಸಾರ್ಟ್ ನ ಈಜು ಕೊಳದಲ್ಲಿ ಅಂಗಾತ ಬಿದ್ದಿರುವುದನ್ನು ನೋಡಿ, ಅಕಾಶವೇ ಕಳಚಿ ಬಿದ್ದಂತಾಗುತ್ತಾಳೆ.

ಆದರೂ ಪೂಜ ಮನೆಗೆ ತೆರಳದೆ ಆ ರೆಸಾರ್ಟ್ ನಲ್ಲಿಯೆ ಉಳಿದು ತನ್ನ ಪತಿಯ ಸಾವಿನ ಕಾರಣ ತಿಳಿಯಲು ಕಾಯುತ್ತಾಳೆ. ಎರಡು ದಿನದ ನಂತರ ನೇರ ಪೊಲೀಸ್ ಸ್ಟೇಶನ್ ಗೆ ಧಾವಿಸುತ್ತಾಳೆ. ಅಲ್ಲಿ ಪೋಲಿಸ್ ಆಫೀಸರ್ ಹೇಳುತ್ತಾರೆ "ಶವ ಪರೀಕ್ಷೆಯ ಪ್ರಕಾರ, ಆಲ್ಕೊಹಾಲ್ ಮತ್ತು ಡ್ರಗ್ಗ್ಸ್ ರಾಜ್ ನ ದೇಹದಲ್ಲಿ ಪತ್ತೆಯಾಗಿದೆ. ಬಹುಶ ವಿಪರೀತ ಕುಡಿತ ಹಾಗೂ ಡ್ರಗ್ಗ್ಸ್ನಿಂದಾಗಿ ನಿಯಂತ್ರಣ ಕಳೆದು ಈಜು ಕೊಳಕ್ಕೆ ಬಿದ್ದು ಸಾವು ಸಂಭವಿಸಿದೆ" ಆದರೆ ಈ ಮಾತನ್ನು ಪೂಜ ಸುತಾರಾಂ ಒಪ್ಪಲು ತಯಾರಿಲ್ಲ. ಏಕೆಂದರೆ, ರಾಜ್ ವಿಪರೀತ ಕುಡಿಯುವ ವ್ಯಕ್ತಿಯಲ್ಲ ಹಾಗೂ ಡ್ರಗ್ಗ್ಸ್ ಅಂತೂ ಮಾರು ದೂರ.

ಪೂಜ ಅಲ್ಲಿಂದ ರಾಧಾಳ ಬಳಿಗೆ ಬಂದು ವಿನಂತಿಸುತ್ತಾಳೆ " ನೀನೂ, ರಾಜ್ ಗುಟ್ಟಾಗಿ ಮಾತನಾಡುತ್ತಿದ್ದೀರಿ, ಗುಟ್ಟಾಗಿ ಹೋಗುತ್ತಿದ್ದೀರಿ, ಏನು ವಿಷಯ? ನಿನಗೇನಾದರೂ ರಾಜ್ ನ ಸಾವಿನ ಬಗ್ಗೆ ಏನಾದರೂ ತಿಳಿದಿದೆಯೇ" ಎಂದು. ಆದರೆ ಅವಳು ಆ ವಿಷಯ ನನಗೆ ತಿಳಿದಿಲ್ಲ ಎಂದು ತನ್ನ ಕೋಣೆ ಸೇರುತ್ತಾಳೆ. ಮರುದಿನ ರಾಧಾ ನೇರವಾಗಿ ಪೂಜಾಳ ಕೋಣೆಗೆ ಬಂದು ಹೇಳುತ್ತಾಳೆ " ರಾಜ್ ಬಗ್ಗೆ ನನಗೂ ದುಖ್ಖವಿದೆ. ಈ ವಿಷಯದಲ್ಲಿ ಒಂದು ಸುಳಿವು ನೀಡಬಲ್ಲೆ ಆದರೆ ಇನ್ನು ಮುಂದೆ ನನ್ನನ್ನು ಭೇಟಿಯಾಗಬಾರದು, ನನ್ನಲ್ಲಿ ಮಾತನಾಡಲೂ ಬಾರದು. ಹಾಗಾದರೆ ಹೇಳುತ್ತೆನೆ ಕೇಳು - ರಾಜ್ ನ ಕ್ಯಾಮೆರದ ಚಿತ್ರಗಳನ್ನು ಪರಿಶೀಲಿಸು, ಉತ್ತರ ಸಿಗಬಹುದು" ಎಂದು. ಇದನ್ನ ಕೇಳಿ ಪೂಜ ತನ್ನ ಕೋಣೆಯಲ್ಲಿ ರಾಜ್ ನ ಕ್ಯಾಮೆರಕ್ಕಾಗಿ ಹುಡುಕಾಡುತ್ತಾಳೆ. ಆದರೆ ಕ್ಯಾಮೆರ ಅಲ್ಲಿ ಅವಳಿಗೆ ಸಿಗುವುದಿಲ್ಲ. ಆಗ ಅವಳ ಕಣ್ಣು ರಾಜ್ ನ ಲ್ಯಾಪ್ಟಾಪ್ ಮೆಲೆ ಬಿಳುತ್ತದೆ. ಆ ಲ್ಯಾಪ್ಟಾಪನ್ನು ಜಾಲಾಡುತ್ತಾಳೆ. ಅಲ್ಲಿ ಅವಳಿಗೆ ರಾಧಾ ಓರ್ವ ಅಪರಿಚಿತನೊಂದಿಗೆ ಹಾಸಿಗೆ ಹಂಚಿಕೊಂಡ ಚಿತ್ರ ಸಿಗುತ್ತದೆ. ಆ ಚಿತ್ರಗಳನ್ನು ಪೋಲಿಸರಿಗೆ ಕೊಟ್ಟಾಗ, ತಕ್ಷಣ ಆ ವ್ಯಕ್ತಿಯನ್ನು ಬಂದಿಸಿ ತಂದು ವಿಚಾರಿಸಿದಾಗ, ಅವನು ಹೇಳ ತೊಡಗುತ್ತಾನೆ "ನನ್ನ ಹೆಸರು ಮಿತ್ತಲ್. ನನಗೆ ದೇಹ ಸುಖ ಬೇಕಾಗಿದ್ದಾಗಲೆಲ್ಲ ಈ ರೆಸಾರ್ಟ್ ಗೆ ಬರುತ್ತಿರುತ್ತೆನೆ. ರಾಜ್ ಒಬ್ಬ ಬ್ಲ್ಯಾಕ್ ಮೆಲರ್ ಆಗಿದ್ದ. ನಾನು ರಾಧಾ ಜೊತೆ ಹಾಸಿಗೆಯಲ್ಲಿದ್ದ ಚಿತ್ರಗಳನ್ನು ರಾಜ್ ಕ್ಲಿಕ್ಕಿಸಿದ್ದ. ನಾನು ಅವನ ಕ್ಯಾಮೆರ ಪಡೆಯಲಿಕ್ಕಾಗಿ ಅವನ ಡ್ರಿಂಕ್ಸ್ ನಲ್ಲಿ ಡ್ರಗ್ಗ್ಸ್ ಬೆರೆಸಿದ್ದು ಹೌದು, ಆದರೆ ಅವನನ್ನು ಕೊಲೆ ಮಾಡಿಲ್ಲ" ಎನ್ನುತ್ತಾನೆ.

ಆಗ ರಾಧಾಳನ್ನು ಕರೆತಂದು ವಿಚಾರಿಸಿದಾಗ, ರಾಧಾ ಹೇಳುತ್ತಾಳೆ "ರಾಜ್ ಬ್ಲ್ಯಾಕ್ ಮೆಲರ್ ಅಲ್ಲ. ಅವನೊಬ್ಬ ಒಳ್ಳೆಯ ವ್ಯಕ್ತಿ. ನನ್ನನ್ನು ಮೋಸದಿಂದ ಈ ರೆಸಾರ್ಟ್ ನವರು ದೇಹ ಮಾರುವ ಧಂದೆಗೆ ಬೀಳಿಸಿದ್ದಾರೆ. ಈ ಕೂಪದಿಂದ ಪಾರಾಗಲು ರಾಜ್ ಸಹಕರಿಸುತ್ತಿದ್ದ. ನಾನು ಪ್ರತಿಸಲವೂ ಗಿರಕಿಗಳೊಂದಿಗೆ ಹೋಗುವಾಗ ಆ ಸ್ಥಳದ ವಿವರ ಹಾಗೂ ಸಮಯವನ್ನು ರಾಜ್ ಗೆ ತಿಳಿಸುತ್ತಿದ್ದೆ. ಆ ಸಮಯಕ್ಕೆ ರಾಜ್ ಬಂದು ಫೊಟೊ ತೆಗೆದು,ಸಾಕ್ಶ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದ" ಎಂದು.

ಅವಳ ಮಾತು ಕೇಳಿ, ಪೋಲೀಸರು ಆ ರೆಸಾರ್ಟ್ ನ ಟೂರಿಸ್ಟ್ ಗೈಡ್ ಕಪಿಲ್ನನ್ನು ಎಳೆ ತಂದು ಏರೊಪ್ಲೇನ್ ಹತ್ತಿಸಿದಾಗ ಒಂದೊಂದಾಗಿ ಬಾಯಿ ಬಿಡುತ್ತಾನೆ. " ಹೌದು, ನಾವು ಕಾಲೇಜು ಹುಡುಗಿಯರಿಗೆ SMS ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಅದ್ರುಷ್ಟದ ಚೀಟಿಯಲ್ಲಿ ಪ್ರಥಮ ಸ್ಥಾನ ಗೆದ್ದಿದೆ. ನಿಮಗೆ ಉಚಿತ ಊಟದೊಂದಿಗೆ 5 ದಿನಗಳ ಉಚಿತ ರೆಸಾರ್ಟ್ ನಲ್ಲಿ ಉಳಿಯುವ ಅವಕಾಶ ಲಭಿಸಿದೆ. ನಿಮ್ಮೊಂದಿಗೆ ನಿಮ್ಮ ಓರ್ವ ಗೆಳತಿಯನ್ನು ಕರೆತರುವ ಸುವರ್ಣಾವಕಾಶವಿದೆ ಎಂದು ಅವರನ್ನು ರೆಸಾರ್ಟ್ ಗೆ ಬರುವಂತೆ ಮಾಡುತ್ತಿದ್ದೆವು. ಅವರು ಬಂದ ನಂತರ ಅವರಿಗೆ ಅಮಲು ಪದಾರ್ಥ ನೀಡಿ ಅವರೊಂದಿಗೆ ಸೆಕ್ಸ್ ನಡೆಸಿ ವಿಡಿಯೊ ಚಿತ್ರಿಸಿ ಅವರನ್ನು ನಮ್ಮ ಹಿಡಿತದಲ್ಲಿಟ್ಟು ಕೊಂಡು ಈ ಧಂದೆಗೆ ಬಳಸುತ್ತೇವೆ ಈ ನಮ್ಮ ಸೆಕ್ಸ್ ಜಾಲವನ್ನು ಆ ರಾಜ್ ಬಯಲು ಮಾಡುವವನಿದ್ದನು. ಅದಕ್ಕಾಗಿ ಡ್ರಿಂಕ್ಸ್ ಮತ್ತು ಡ್ರಗ್ಗ್ಸ್ ನ ನಶೆಯಲ್ಲಿದ್ದ ರಾಜ್ ನನ್ನು ಈಜುಕೊಳಕ್ಕೆ ದೂಡಿ ಉಸಿರು ಕಟ್ಟಿಸಿ ಸಾಯಿಸಿದೆ"

ಇವರ ದೊಷರೊಪಣೆ ಸಾಬೀತಾಗಿ,ನ್ಯಾಯಾಲಯವು ಈ ಕೆಳಗಿನಂತೆ ಶಿಕ್ಷೆ ವಿಧಿಸಿತು.
ಕಪಿಲ್:
ರಾಜ್ ನ ಕೊಲೆಗಾಗಿ ಐಪಿಸಿ ಸೆಕ್ಷನ್ 302
ಇಮ್ಮೊರಲ್ ಟ್ರಾಫಿಕ್ ಪ್ರಿವೆನ್ಶನ್ ಆಕ್ಟ್ ಪ್ರಕಾರ 1956/4/5 ರಂತೆ ಮಹಿಳೆಯರನ್ನು ವ್ಯೆಶ್ಯಾವ್ರತ್ತಿಗೆ ಬಳಸಿದ್ದಾಕ್ಕಾಗಿ - ಜೀವಾವಧಿ ಶಿಕ್ಷೆ ನೀಡಲಾಯಿತು.
ಮಿತ್ತಲ್:
ಅಪರಾಧ ಷಡ್ಯಂತ್ರಕ್ಕಾಗಿ- ಐಪಿಸಿ ಸೆಕ್ಷನ್ 120B
ರಾಜ್ ನ ಕೊಲೆಯಲ್ಲಿ ಭಾಗಿಯಾಗಿರುವುದಕ್ಕಾಗಿ- ಐಪಿಸಿ ಸೆಕ್ಷನ್108 & 109 ರಂತೆ ಜೀವಾವಧಿ ಶಿಕ್ಷೆ ನೀಡಲಾಯಿತು.
ಇಲ್ಲಿ ಮುಖ್ಯವಾದ ಎರಡು ವಿಚಾರಗಳನ್ನು ನಾವು ಅರ್ಥ ಮಾಡಿ ಕೊಳ್ಳ ಬೇಕಾಗಿದೆ
೧) ಪತಿ ಪತ್ನಿಯರು ತಮ್ಮ ವಿಶಯಗಳನ್ನು ಹಂಚಿ ಕೊಳ್ಳುವುದರಿಂದ ಪರಸ್ಪರ ಸಲಹೆ ಸೂಚನೆಗಳನ್ನು ವಿನಿಮಯ ಮಾಡಿ ಕೊಳ್ಳಬಹುದು. ಸಾಧ್ಯವಾದಶ್ಟು ನಮ್ಮ ಕೆಲಸ ಕಾರ್ಯಗಳ ಬಗ್ಗೆ ಪತ್ನಿಯರಿಗೂ ಸ್ವಲ್ಪ ಮಟ್ಟಿನ ಮಾಹಿತಿ ಕೊಟ್ಟು ಅವರನ್ನು ನಿರಾಳರಾಗಿಯೂ, ಜಾಗ್ರತರನ್ನಗೀಸಬಹುದು.
೨) ಯಾವುದೊ ಗೊತ್ತು ಗೊರಿಯಿಲ್ಲದ SMS ಆಫ಼ರ್ ಗಳನ್ನು ನಂಬಿ ಕಣ್ಣು ಮುಚ್ಚಿ ದೌಡಾಯಿಸುವುದು, ನಮ್ಮನ್ನು ನಾವೆ ಅತೀ ದೊಡ್ಡ ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ.
ಈ ಲೇಖನದ ಮೂಲಕ ನಮ್ಮ ಸುತ್ತ ಮುತ್ತಲಿನಲ್ಲಿ ಯಾವ್ಯಾವ ರೀತಿಯ ಮೋಸ ಹಾಗೂ ಷಡ್ಯಂತ್ರಗಳ ಬಲೆ ಬೀಸಿ ನಮ್ಮನ್ನು ಅಪಾಯಕ್ಕೆ ಸಿಲುಕಿಸುತ್ತಾರೆ ಎಂಬ ಮುನ್ನೆಚ್ಚರಿಕೆ ಕೊಡುವುದಾಗಿತ್ತು ನನ್ನ ಉದ್ದೇಶ


"ಸಾವಧಾನರಾಗಿರಿ, ಸುರಕ್ಷಿತರಾಗಿರಿ" ಎಂಬ ಸಂದೇಶದೊಂದಿಗೆ
ನಿಮ್ಮವನೇ ಆದ

ಅನಾಮಿಕ...

ಶುಕ್ರವಾರ, ನವೆಂಬರ್ 28, 2014

ಮದುವೆ

# ಮದುವೆ #

ಗೆಳೆಯರೇ,

ಮದುವೆ ಎಂಬುದು ಎರಡು ಜೀವಗಳ, ಎರಡು ಮನಸ್ಸುಗಳ ಸುಂದರ ಸಮಾಗಮವಾಗಿದೆ. ಸಾವಿರಾರು ಸುಂದರ ಕನಸುಗಳನ್ನು ಕಂಡು, ಸಾಕಾರ ಗೊಳಿಸಲು ಇಡುವ ಮೊದಲ ಹೆಜ್ಜೆಯಾಗಿದೆ. ಮದುವೆಯ ಆರಂಭಿಕ ದಿನಗಳಲ್ಲಿ ತಮ್ಮದೇ ಲೋಕದಲ್ಲಿ ವಿಹರಿಸಿ ಕ್ರಮೇಣ ತಮ್ಮ ಜೀವನಕ್ಕೆ ಮರಳುವಾಗ ಬಹುತೇಕ ಸಂಸಾರಗಳಲ್ಲಿ ಕೆಲವೊಂದು ತಪ್ಪು ಗ್ರಹಿಕೆ ಗಳಿಂದಾಗಿ ಸಂಸಾರದ ನೌಕೆ ಅಲುಗಾಡಲು ಶುರುವಾಗುತ್ತದೆ.

ಹೊಸದಾಗಿ ಮನೆಗೆ ಬಂದ ಸೊಸೆ ನಮ್ಮ ಮಾತು ಕೇಳುತಿಲ್ಲ. ನಮ್ಮ ಸಂಸಾರಕ್ಕೆ ಹೊಂದಿಕೊಂಡು ನಡೆಯುತ್ತಿಲ್ಲ ಇತ್ಯಾದಿ, ಇತ್ಯಾದಿ. ತನ್ನವರನ್ನೆಲ್ಲ ಬಿಟ್ಟು ಹೊಸ ಪರಿಸರಕ್ಕೆ ಬಂದ ಸೊಸೆ ತನ್ನ ಬೇಸರ, ಖುಷಿಗಳನ್ನು ಗಂಡನ ಬಳಿ ಹೇಳಿಕೊಂಡರೆ, ಏಕಾಂತ ಬಯಸಿದರೆ ಅದಕ್ಕೆ ಸಿಟ್ಟೇಳುವ ಅತ್ತೆ . ಮಗನನ್ನು ತನ್ನ ಕೈಮುಷ್ಠಿಯಲ್ಲಿಟ್ಟುಕೊಂಡಿದ್ದಾಳೆ ಎಂಬ ಭಾವನೆ ಸೊಸೆಗೆ ಬಂದರೆ ಸಂಸಾರದಲ್ಲಿ ಒಡಕು ಮೂಡತೊಡಗುತ್ತದೆ .ಈ ರೀತಿಯ ಮನಸ್ಥಿತಿಯಿಂದ ಹೊರಬಂದರೆ ಮಾತ್ರ ಅತ್ತೆ ಸೊಸೆಯರ ನಡುವೆ ಸಾಮರಸ್ಯ ಏರ್ಪಡಬಹುದು.

ಇಂಥ ಸನ್ನಿವೇಶದಲ್ಲಿ ಗಂಡನಾದವನು ಅಸಾಹಾಯಕನಾಗುತ್ತಾನೆ. ಅತ್ತ ತಾಯಿಯತ್ತ ವಾಲುವಂತಿಲ್ಲಾ, ಇತ್ತ ಪತ್ನಿಯ ಮಾತು ಕೇಳುವಂತಿಲ್ಲ. ಮುತ್ತು ಕೊಡುವ ಮಡದಿ ಬಂದಾಗ ತುತ್ತು ಕೊಟ್ಟ ತಾಯಿಯನ್ನು ಮರೆಯಲಾಗದೆ, ಎದುರಿಸಲಾಗದೆ ಗಂಡನಾದವನು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗುತ್ತಾನೆ. ಅತ್ತೆ ಸೊಸೆಯರ ಒಳ ಜಗಳ ಬಹುತೇಕ ಸಂಸಾರಗಳಲ್ಲಿ ಕಾಣಬಹುದು. ಅಂತಹ ಸಂಧರ್ಭಗಳಲ್ಲಿ ಅತೀ ಹೆಚ್ಚಿನ ಜಾಗರೂಕತೆಯಿಂದ ಜಾಣ ಮೌನ ವಹಿಸುವುದು ಉತ್ತಮ. ಇಬ್ಬರ ಮಾತನ್ನೂ ಆಲಿಸಿ, ಗಣನೆಗೆ ತೆಗೆದು ಕೊಳ್ಳದೇ ಪರಿಸ್ಥಿತಿ ತಿಳಿಗೊಳಿಸಬೇಕು. ಸಾಧ್ಯವಾದರೆ ಪ್ರತ್ಯೇಕವಾಗಿ ಅವರವರ ಮೂಡ್ ನೋಡಿ ಪ್ರೀತಿಯಿಂದ, ಜಾಣ್ಮೆ ಯಿಂದ ಪರಸ್ಪರ ಹೊಂದಾಣಿಕೆ ಮಾಡಿ ಕೊಳ್ಳಲು ಅರ್ಥವಾಗುವಂತೆ ಹೇಳಬೇಕು.

ಇಲ್ಲಿ ಚಿಂತಿಸಬೇಕಾದ ವಿಷಯ - ಆ ಹೊಸ ಮದುಮಗಳು ತನ್ನ ಹುಟ್ಟಿನಿಂದ ಯೌವ್ವಾನಾವಸ್ಥೆಯ ತನಕ ಅವಳದೇ ಆದ ಜೀವನ ಶೈಲಿ ರೂಪಿಸಿಕೊಂಡು, ನಮಗೆ ವ್ಯತಿರಿಕ್ತವಾದ ವಾತಾವರಣ ದಲ್ಲಿ ಬೆಳೆದು ಬಂದವಳಾಗಿರುತ್ತಾಳೆ. ಅಂತಹಾ ಯುವತಿ ಮದುಮಗಳಾಗಿ ಬಂದ ಕೂಡಲೇ ತಮ್ಮ ಸಂಪ್ರದಾಯಕ್ಕೆ, ತಮ್ಮ ಕುಟುಂಬಾಚರಣೆಗೆ ಒಗ್ಗಿಕೊಳ್ಳ ಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ಅವಳು ಮಾಡುವ ಮನೆಗೆಲಸಗಳಲ್ಲಿ ಹೆಚ್ಚು ಕಮ್ಮಿಯಾದರೂ,ಸರಿಯಾದ ಸಮಯ ಸಂಧರ್ಭ ನೋಡಿ ಪ್ರೀತಿಯಿಂದ ತಿಳಿ ಹೇಳುವುದು ಜಾಣತನವಾಗಿದೆ. ಅವಳು ಮಾಡುವ ಅಡುಗೆಯ ರುಚಿಯಲ್ಲಿ ಸ್ವಲ್ಪ ಏರು ಪೆರಾದಲ್ಲಿ, ಅದನ್ನು ಸಹಿಸಿಕೊಂಡು "ಅಡುಗೆ ಚೆನ್ನಾಗಿತ್ತು ಆದರೆ ಇನ್ನೂ ಕೂಡ ರುಚಿಯಾಗಿ ಮಾಡುವ ನೈಪುಣ್ಯತೆ ನಿನ್ನಲ್ಲಿದೆ" ಎಂದು ಹುರಿದುಂಬಿಸಬೆಕು. ಈಗಿನ ಕಾಲದಲ್ಲಿ ವೆಬ್ ಸೈಟ್ ಗಳಲ್ಲಿ, ಯೂ ಟ್ಯೂಬ್ ನಲ್ಲಿ ಬೇಕಾದಷ್ಟು ಅಡುಗೆಯ ವಿಧಾನಗಳು ಸುಲಭವಾಗಿ ಲಭ್ಯವಿದೆ. ಸಾಧ್ಯವಾದರೆ ಅಂತಹ ವಿಡಿಯೋಗಳನ್ನೂ, ಲೇಖನ ಗಳನ್ನೂ ತೋರಿಸಿ ಪ್ರೊತ್ಸಾಹಿಸಬೇಕು.

ಗಂಡು ಆದವನು, ಅವಳೂ ಕೂಡ ಒಂದು ಹೆಣ್ಣು ಜೀವ, ಅವಳಿಗೆ ಅವಳದೇ ಆದಂತಹ ಆಸೆ ಆಕಾಂಕ್ಷೆ ಗಳಿವೆ ಎಂಬುದನ್ನು ಅರ್ಥ ಮಾಡಿ ಕೊಂಡು, ತನ್ನ short temper ಅದುಮಿಟ್ಟುಕೊಂಡು ಚಾಕಚಕ್ಯತೆಯಿಂದ, ಎರಡೂ ಕಡೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆದರೆ ಮುಂದಿನ ದಿನಗಳಲ್ಲಿ ತಮಗೆ ಪೂರಕವಾದ ವಾತಾವರಣ ನಿರ್ಮಿಸಲು ಸಹಕಾರಿಯಾಗ ಬಲ್ಲುದು. ಮನೆಯಲ್ಲಿ ಅತ್ತೆ-ಸೊಸೆ ಜಗಳ ಸಾಮಾನ್ಯ ಬಿಡಿ ಅಂತ ಸುಮ್ಮನಿದ್ದು ಬಿಟ್ಟರೆ ಸಮಸ್ಯೆ ಬೆಂಕಿಗೆ ತುಪ್ಪ ಸುರಿದಂತೆ ಆಗುವ ಸಂಭವವಿದೆ . ತನ್ನ ತಾಯಿಯಿಂದ (ಅತ್ತೆ ) ಸೊಸೆಗಾಗುವ (ತನ್ನ ಹೆಂಡತಿಗೆ ) ಅಥವಾ ತನ್ನ ಹೆಂಡತಿಯಿಂದ ತನ್ನ ತಾಯಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಡನಾದವನು ಗಮನಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಉಂಟಾಗುವ ದಂಪತಿಗಳ ಜಗಳದಿಂದ ಮನೆ ರಣರಂಗ ವಾಗುವುದು ಇದೆ . ಆದ್ದರಿಂದ ಗಂಡನಾದವನು ತನ್ನ ಸಂಸಾರದಲ್ಲಿನ ಆಗು ಹೋಗುಗಳಿಗೆ ಕಿವಿಯಾಗಿ ಎಲ್ಲವನ್ನೂ ಸರಿದೂಗಿಸುತ್ತಾ, ಇಬ್ಬರೂ ಪರಸ್ಪರ ಸಹಕಾರದಿಂದ ಸಾಗುವ ಹಾಗೆ ಮಾಡಬೇಕು.

ಮದುವೆಯ ಹೊಸತರಲ್ಲಿ ಹೆಚ್ಚಿನವರೆಲ್ಲರಿಗೂ ಇಂತಹ ಸನ್ನಿವೇಶಗಳು ಅನುಭವ ಆಗಿಯೇ ಆಗುತ್ತದೆ. ನನಗೂ ಎದುರಾಗಿತ್ತು. ಸಾಧ್ಯವಾದಷ್ಟು ನಿಭಾಯಿಸಿದ್ದೆನೆ. ಹಾಗೂ ಕೆಲವು ಸಂದರ್ಭಗಳಲ್ಲಿ ಎಡವಿದ್ದೆನೆಯೂ ಕೂಡ. ಹೊಸದಾಗಿ ಮದುವೆಯಾದವರಿಗೂ ಹಾಗೂ ಇನ್ನು ಮದುವೆ ಆಗುವವರಿಗೆ ಈ ಕೆಲವು ಟಿಪ್ಸ್ ಗಳು ತಮ್ಮ ವೈವಾಹಿಕ ಜೀವನವನ್ನು ಸಾಧ್ಯವಾದಷ್ಟು ಸುಗಮ ವಾಗಿಸಲಿ ಎಂಬ ಸದುದ್ದೇಶ ನನ್ನದು.

ಇಂತಿ
ಅನಾಮಿಕ

ಭಾನುವಾರ, ನವೆಂಬರ್ 9, 2014

ಒಂದು ಮದುವೆಯ ಕಥೆ

ಇಸವಿ 2004ರ ಸಮಯ. ಯಾರ ರಗಳೆಯೂ, ಕಿರಿ ಕಿರಿಯ ಹಂಗೂ ಇಲ್ಲದೆ ಒಬ್ಬ ಅವಿವಾಹಿತ ಯುವಕನ ಖರ್ಚಿಗೆ ಬೇಕಾದಷ್ಟು ಸ್ವಲ್ಪ ಮಟ್ಟಿನ ಸಂಬಳದೊಂದಿಗೆ ಹಾಯಾಗಿದ್ದ ನನಗೆ 26ನೇ ವಯಸ್ಸಿನಲ್ಲಿ ಮದುವೆ ಎಂಬ ಬಂಧನದಲ್ಲಿ ಬಂಧಿಸಿದವರು ನನ್ನ ಗೆಳೆಯರಾದ ಯಾಸೀರ್ ಹಸನ್ ಮತ್ತು ಅವನ ಸೋದರ ತಮ್ಮ ಅಕ್ರಂ ಹಸನ್. ಸ್ವಲ್ಪ ಮಟ್ಟಿನ ಸಾಮಾಜಿಕ ಕಳಕಳಿ ಇರುವ ನಾನು ಏನಾದರು ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಮದುವೆ ಮಾಡಿ ತೋರಿಸಿ ಇನ್ನೊಬ್ಬರಿಗೆ ಮಾದರಿಯಾಗಬೇಕೆಂಬ ಹಂಬಲವೂ ಇತ್ತು.

ಅದೊಂದು ದಿನ ಅಕ್ರಂ ಹಸನ್ನ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಾ ಇರುವಾಗ ಒಂದು ಸಂಜೆ ನಾವು ಮೂವರು ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಾ ಇದ್ದೆವು. ಹರಟೆಯ ಮಧ್ಯೆ "ಏನೋ ಮದುವೆಯ ವಯಸ್ಸಾಯಿತು ಆ ಬಗ್ಗೆ ಏನಾದರು ಯೋಚಿಸಿದ್ದೀಯಾ" ಎಂದು ತಮಾಷೆಯಾಗಿ ಕೇಳಿಯೇ ಬಿಟ್ಟ. ಯಾರಾದರು ಬಡ,ಒಳ್ಳೆಯ ಕುಟುಂಬದ ಗುಣವಂತ ಹುಡುಗಿ ಇದ್ರೆ ಹೇಳು... ಎಂದು ನಾನು ಕೂಡ ತಾಮಾಷೆಯಾಗಿಯೇ ಹೇಳಿದೆ. ಈ ತಮಾಷೆಯ ಮಾತು ಮುಂದೊಂದು ದಿನ ನನ್ನ ಜೀವನದ ದಿಕ್ಕನ್ನೆ ಬದಲಾಯಿಸುತ್ತದೆ ಎಂದು ತಿಳಿದಿರಲಿಲ್ಲ.ಈ ಮಾತು ನನ್ನ ಬಾಯಿಯಿಂದ ಹೊರಬರುವುದನ್ನೇ ಕಾಯುತ್ತಿದ್ದವನಂತೆ ನನ್ನ ಪಕ್ಕದ್ಮನೆಯಲ್ಲಿ ಒಬ್ಬಳು ಹುಡುಗಿ ಇದ್ದಾಳೆ, ಸುಂದರವಾಗಿದ್ದಾಳೆ ನಿನ್ನಷ್ಟೇ ಪ್ರಾಯವಾಗಿರಬಹುದು(ನಂತರ ತಿಳಿಯಿತು ನನಗಿಂತ 4 ವರ್ಷ ಹಿರಿಯವಳು ಎಂದು) ಬಾಲ್ಯದಲ್ಲಿ ನಾವಿಬ್ಬರೂ ಒಟ್ಟಿಗೆ ಬೆಳೆದದ್ದು. ಅವಳ ತಂಗಿಗೆ ಮದುವೆಯಾಗಿ 7 ವರ್ಷ ಕಳೆದಿದೆ ಕಾರಣ ಅವಳು 12ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಒಳ್ಳೆ ಗಂಡು ಸಿಕ್ಕಿದ್ದರಿಂದ ಅವಳಿಗೆ ಬೇಗ ಮದುವೆ ಮಾಡಿ ಕೊಟ್ಟಿದ್ದರು ಮನೆಯವರು. ತಂಗಿಗೆ ಮದುವೆಯಾಗಿದೆ ಆದರೆ ಅಕ್ಕನಿಗೆ ಇನ್ನೂ ಯಾಕೆ ಆಗಿಲ್ಲ ಎಂದು ನೋಡಲು ಬಂದ ಗಂಡುಗಳೆಲ್ಲ ಸಂಶಯಿಸಿ ಬೇಡ ಎಂದು ಬಿಟ್ಟು ಹೊಗುತ್ತಿದ್ದಾರೆ ಎಂದು ನನಗೆ ಮಾತನಾಡಲು ಅವಕಾಶವೇ ಕೊಡದೆ ಒಂದೇ ಮಾತಿನಲ್ಲಿ ಹೇಳಿ ಮುಗಿಸಿದ. ನೋಡು ಯಾಸೀರ್ ನೀನು ನನ್ನ ಗೆಳೆಯ, ನಾವಿಬ್ಬರೂ ಅಣ್ಣ ತಮ್ಮಂದಿರ ಹಾಗೆ.. ನೀನು ಅಣ್ಣನ ಸ್ಥಾನದಲ್ಲಿ ನಿಂತು ನನ್ನ ಎರಡು ಪ್ರಶ್ನೆಗಳಿಗೆ ಉತ್ತರಿಸು ಎಂದೆ.

ಮೊದಲನೇ ಪ್ರಶ್ನೆ- ನಾನು ಕಪ್ಪಗಿನ ಮನುಷ್ಯ, ನೋಡಲು ಅಷ್ಟೇನೂ ಸುಂದರವಾಗಿಲ್ಲ ಆದರೂ ಅವಳು ನನ್ನನ್ನು ಗಂಡನಾಗಿ ಸ್ವೀಕರಿಸಲು ಸಾಧ್ಯವೇ?
ಎರಡನೇ ಪ್ರಶ್ನೆ - ನಮ್ಮ ಮದುವೆ ಆದರೆ ನನ್ನ ಕಷ್ಟಗಳಿಗೆ ಹೆಗಲು ಕೊಟ್ಟು ನಡೆಯುವಳು ಎಂಬ ಭರವಸೆ ನಿನಗಿದೆಯಾ?
ಹಾಗಾದರೆ ನಿನ್ನ ಮಾತಿನ ಮೇಲೆ ವಿಶ್ವಾಸವಿಟ್ಟು ನಾನು ಒಪ್ಪುತ್ತೇನೆ.. ನನಗೆ ಅವಳ ಅಂದ ಚೆಂದ, ವಯಸ್ಸು ಬಣ್ಣ ಎತ್ತರ ಯಾವುದೂ ಅಗತ್ಯವಿಲ್ಲ. ನನಗೆ ಬೇಕಾಗಿರುವುದು ಒಂದು ಒಳ್ಳೆಯ ಜೀವನ ಸಂಗಾತಿ ಎಂದು ನಾನೂ ಕೂಡಾ ಒಂದೇ ಉಸಿರಿನಲ್ಲಿ ಹೇಳಿದೆ. ಈ ಮಾತುಕತೆಯ ಮಧ್ಯೆ ನನಗರಿವಿಲ್ಲದೆ ಅವಳ ಒಂದು ಪೋಟೋ ತರಿಸಿ ನನ್ನ ಕೈಗಿಟ್ಟು ಆ ಹುಡುಗಿ ಬಗ್ಗೆ ನಾನು ಭರವಸೆ ಕೊಡುತ್ತೇನೆ ಎಂದು ಹೇಳಿದ. ಅಲ್ಲದೆ ಮರುದಿನವೇ ಹುಡುಗಿಯನ್ನು ನೋಡಲು ಹೋಗಲು ಒತ್ತಾಯಿಸಿದ. "ನಿನ್ನ ಭರವಸೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.. ಹಾಗಾಗಿ ಹೆಣ್ಣು ನೋಡುವ ಅವಶ್ಯಕತೆ ಇಲ್ಲಾ. ಹುಡುಗಿಯ ಮನೆಯವರಿಗೆ ಮದುವೆಯ ದಿನಾಂಕ ನಿಗದಿಪಡಿಸಲು ಹೇಳು.. ಎಂದು ನಾನು ಹೇಳಿದರೂ ಅದಕ್ಕವನು ಒಪ್ಪದೆ, ನೀನೊಮ್ಮೆ ನೋಡಿ ಒಪ್ಕೊಂಡ್ರೆ ಎಲ್ಲರಿಗೂ ಸಮಾಧಾನವಗುತ್ತೆ ಅಂದಾಗ, ಹೆಣ್ಣು ನೋಡಲು ನಾನು ಒಪ್ಪಿಕೊಂಡೆ.

ಮರುದಿನ ಹುಡುಗಿ ನೋಡಲು ಒಬ್ಬನೇ ಅವಳ ಮನೆಗೆ ಹೋದೆ. ಹುಡುಗಿ ನನಗೆ ಇಷ್ಟವಾದಳು, ಹಾಗೆಯೆ ನಾನೂ ಕೂಡಾ ಹುಡುಗಿಗೆ ಇಷ್ಟವಾದೆ. ಹುಡುಗಿ ಮನೆಯಿಂದ ಹೊರಗೆ ಬಂದವನೇ ತಾಯಿಗೆ ಪೋನ್ ಮಾಡಿ ವಿಷಯ ತಿಳಿಸಿದೆ "ಅಮ್ಮಾ ನಾನು ಒಂದು ಹುಡುಗಿಯನ್ನು ನೋಡಿದ್ದೇನೆ ಅವಳನ್ನೇ ಮದುವೆಯಾಗಬೇಕೆಂದಿದ್ದೇನೆ, ಅದಕ್ಕೆ ನಿನ್ನ ಅನುಮತಿ ಬೇಕಿತ್ತು". ನೀನು ನನ್ನ ಐದು ಗಂಡುಮಕ್ಕಳಲ್ಲಿ ಮೊದಲನೆಯವ, ನಿನಗೆ ತಂಗಿಯಂದಿರೂ ಇಲ್ಲಾ, ಹುಡುಗಿ ಕೂಡಾ ನೋಡಿಯಾಗಿದೆ ಹಾಗಾಗಿ ನಿನ್ನಿಷ್ಟವೇ ನನ್ನಿಷ್ಟ" ಎಂದಳು. "ಹಾಗದರೆ ನನ್ನ ಗೆಳೆಯನ ಬಾಡಿಗೆ ಕಾರು ಮನೆಗೆ ಕಳುಹಿಸಿದ್ದೇನೆ.. ನಿನ್ನ ಸೊಸೆಯಾಗುವವಳನ್ನು ನೋಡಲು ಬೇಗ ಬಾ" ಎಂದೆ.ಅಮ್ಮನೂ ಬಂದು ಹುಡುಗಿಯನ್ನು ನೋಡಿ ಇಷ್ಟಪಟ್ಟಳು.

ನಂತರ ಗೆಳೆಯ ಮುಂದೇನು ಅಂತ ಕೇಳಿದ. "ನೋಡು ಯಾಸೀರ್ ಹುಡುಗಿ ನನಗೂ ನನ್ನ ಮನೆಯವರಿಗೂ ಒಪ್ಪಿಗೆ ಆದರೆ ನಮ್ಮ ತಮಾಷೆ ಇಲ್ಲಿಯವರೆಗೆ ಬಂದು ಮುಟ್ಟುತ್ತದೆ ಎಂದು ತಿಳಿದಿರಲಿಲ್ಲ.ಮುಖ್ಯವಾದ ವಿಚಾರವೇನೆಂದರೆ ನನ್ನಲ್ಲಿರುವುದು ಬರೀ 10 ರೂ ನೋಟು ಮಾತ್ರ ಬೇರೆನೂ ನನ್ನಲ್ಲಿಲ್ಲ.ಖರ್ಚಿಗೇನೂ ಮಾಡುವುದು ಹೇಳು... ವರದಕ್ಷಿಣೆ ನನ್ನ ಆತ್ಮ ಸಾಕ್ಷಿಗೆ ಕಳಂಕ ಹಾಗಾಗಿ ನೀನೆ ಏನಾದರು ಉಪಾಯ ಹೇಳು" ಎಂದೆ. "ಈಗ ಮನೆಗೆ ಹೋಗು ನಾಳೆ ಬೆಳಗ್ಗೆ ನನ್ನ ಮನೆಗೆ ಬಾ ಆರಾಮವಾಗಿ ಕುಲಿತುಕೊಂಡು ಮಾತನಾಡುವ" ಎಂದು ಬೆನ್ನು ತಟ್ಟಿ ನನ್ನನ್ನು ಬೀಳ್ಕೊಟ್ಟ , ನಾನು ಅದೇ ಕಾರಿನಲ್ಲಿ ಮನೆಗೆ ತೆರಲಿದೆ.

ಹಾದಿಯಲ್ಲಿ ನನ್ನ ಮಾವ ನನ್ನನ್ನು ದಾರಿಯುದ್ದಕ್ಕೂ 1 ಲಕ್ಷ ಹಣ ಮತ್ತು 20 ಪವನ್ ಬಂಗಾರ ವರದಕ್ಷಿಣೆ ಸ್ವೀಕರಿಸುವಂತೆ ಒತ್ತಾಯಿಸುತ್ತಿದ್ದರು. "ಮಾವ ವರದಕ್ಷಿಣೆ ಪಡೆದು ನಾನು ನನ್ನನ್ನು ಆ ಹುಡುಗಿ ಕಡೆಯವರಿಗೆ ಮಾರಲ್ಪಡಲು ಇಚ್ಚಿಸುವುದಿಲ್ಲ ನನ್ನ ಬಳಿ ಹಣ ಇಲ್ಲದೇ ಇರಬಹುದು ಆದರೆ ಅಲ್ಲಾಹನಲ್ಲಿ ಭರವಸೆ ಇದೆ ನಿಮಗಿಷ್ಟವಿದ್ದರೆ ಬನ್ನಿ ಇಲ್ಲಾಂದ್ರೆ ಸುಮ್ನಿರಿ ಎಂದೆ" ಕೊನೆಗೆ ಸ್ವಲ್ಪ ಏರು ಧ್ವನಿಯಲ್ಲೇ ಉತ್ತರಿಸಿದೆ. ಅಷ್ಟರವರೆಗೆ ಮಾವನಲ್ಲಿ ಮುಖ ಕೊಟ್ಟು ಮಾತನಾಡಲೂ ಹೆದರುತ್ತಿದ್ದ ನಾನು ಅವತ್ತು ಆ ರೀತಿ ಉತ್ತರ ಕೊಟ್ಟದ್ದು ಈಗಲೂ ನನ್ನಿಂದ ನಂಬಲಾಗುತ್ತಿಲ್ಲ.

ಮರುದಿನ ಯಾಸೀರ್ ನನ್ನು ಭೇಟಿಯಾದೆ. ನನ್ನ ಗೆಳೆಯರೊಡನೆ ಡೊನೇಷನ್ ಕೇಳಿ 20 ಸಾವಿರ ರೂಪಾಯಿ ಜಮೆಯಾಗಿದೆ, ಇದರಿಂದಲೇ ಸ್ವಲ್ಪ ಅಡ್ಜೆಸ್ಟ್ ಮಾಡ್ಕೋ ಎಂದ. ಸಂತೋಷದಿಂದ ಸ್ವೀಕರಿಸಿ ನಾಳೆಗೆ ಮದುವೆ ದಿನಾಂಕ ನಿಗದಿ ಮಾಡುವಾ ಎಂದೆ.

ಚಹಾ ಪಾನೀಯದೊಂದಿಗೆ ನಿಶ್ಚಿತಾರ್ಥವೂ ಆಯಿತು 15 ದಿನಗಳೊಳಗೆ ಮದುವೆಯೂ ನಿಗದಿಯಾಯಿತು. ಈ ವಿಷಯ ಕೇಳಿ ಊರಿನವರು,ಗೆಳೆಯರು ಆಶ್ಚರ್ಯಚಕಿತರಾಗಿ ನನ್ನನ್ನೇ ನೋಡುತ್ತಿದ್ದರು. ಕೆಲವರು ವ್ಯಂಗ್ಯವಾಗಿ ಹೇಳಿಯೇ ಬಿಟ್ಟರು "ನೀನು ಹೇಳಿರುತ್ತಿದ್ದರೆ ಕನಿಷ್ಠ 2 ರಿಂದ 3 ಲಕ್ಷ ಮತ್ತು 25 ರಿಂದ 35 ಪವನ್ ಚಿನ್ನ ಸಿಗುವ ಹುಡುಗಿಯನ್ನು ತೋರಿಸುತ್ತಿದ್ದೆವು". ನಿನ್ನ ಗೆಳೆಯ ಕೊಟ್ಟ ಕೇವಲ 20 ಸಾವಿರದಲ್ಲಿ ನೀನು ಹೇಗೆ ಮದುವೆಯಾಗಿತ್ತೀಯಾ.. ? ಅದು ಸಾಧ್ಯವೇ ಇಲ್ಲಾ ಎಂದು. ಇಂತಹ ಕುಹುಕಗಳು ನನಗೆ ಗಜ ಬಲವನ್ನೇ ಕೊಟ್ಟಿತು. ನಾನು ಇನ್ನಷ್ಟು ಬಲಿಷ್ಠನಾದೆ. ನನ್ನ ತಾಯಿ ಕಡ್ಡಾಯ ಮಹರ್ ಗಾಗಿ ಅವರ ಕೈಯಲ್ಲಿದ್ದಂತಹ ಒಂದೂವರೆ ಪವನ್ ಚಿನ್ನದ ಸರ ನನ್ನ ಕೈಗಿಟ್ಟರು ಹಾಗೆನೆ ಬಡ್ಡಿ ಮಾರ್ವಾಡಿಯಿಂದ 15 ಸಾವಿರ ಸಾಲನೂ ತೆಗೆದು ಕೊಟ್ಟರು. ಈ ಎಲ್ಲಾ ಹಣದಿದ ಶಾಪಿಂಗ್ ಗೆ ಹೋದೆವು. ಮೊದಲು ಉಡುಪಿಯ ನನ್ನ ಗೆಳೆಯನ ಶೂ ಮಹಲ್ ಗೆ, ಅಲ್ಲಿ ನನಗೆ ತಂದೆ ತಾಯಿ ಮತ್ತು ತಮ್ಮಂದಿರಿಗೆ ಶೂ ಖರೀದಿಸಿ 3200 ಬಿಲ್ ಆಯಿತು. ನಿನ್ನ ಮದುವೆಯ ವಿಷಯ ತಿಳಿದು ತುಂಬಾ ಸಂತೋಷವಾಯಿತು ದೇವರು ನಿನ್ನನ್ನು ಒಳ್ಳೆಯದು ಮಾಡಲಿ ಎಂದು ಕೇವಲ 800 ರೂಪಾಯಿಯಷ್ಟೇ ಪಡೆದುಕೊಂಡ ಸಾಧೀಕ್ ಭಾಯಿ, ಜೊತೆಗೆ ಮದುಮಗಳಿಗೆ ಬೆಲೆಬಾಳುವ ಚಪ್ಪಲಿಯೂ ಉಚಿತವಾಗಿ ನೀಡಿದರು. ಅಲ್ಲಿಂದ ಇನ್ನೋರ್ವ ಗೆಳೆಯ ಪಯಾಝ್ ನ ಬಟ್ಟೆಯಂಗಡಿಗೆ ಹೋದೆ. ಅಲ್ಲಿ ನನಗೆ 2 ಜೊತೆ ಡ್ರೆಸ್ ಮತ್ತು ಮದುಮಗಳಿಗೆ ಒಂದು ಜೊತೆ ಚೀಪ್ ಆಂಡ್ ಬೆಸ್ಟ್ ಬಟ್ಟೆ ಖರೀದಿಸಿದೆ. ಅವನು ನನಗೆ ನನ್ನ ಅಸಲು ಹಣ ಮಾತ್ರ ಸಾಕು ಲಾಭಾಂಶ ಬೇಡ ಎಂದು ಬಹಳ ಕಡಿಮೆ ಹಣ ಪಡೆದ(ಮೊತ್ತ ಎಷ್ಟೆಂದು ಈಗ ನೆನಪಿಲ್ಲ).
ನಮ್ಮ ಊರಿನ ಎಚ್.ಎಮ್.ಟಿ ಬಸ್ ನ ಮಾಲಕರಾದ ಖಲೀಲ್ ಸಾಹೇಬರು ನನ್ನ ಮದುವೆಯ ವಿಷಯ ತಿಳಿದು ಸ್ವತಃ ತಾನಾಗಿ ಬಂದು "ನಿನ್ನ ಮದುವೆಗೆ ನನ್ನ ಬುಸ್ ಉಚಿತವಾಗಿ ತೆಗೋ ಕೇವಲ 2000 ರೂಪಾಯಿಯ ಡೀಸೆಲ್ ಹಾಕಿದರೆ ಸಾಕು.ಸಮಯ ಹೇಳು ಟ್ರಿಪ್ ಕಟ್ ಮಾಡಿ ಕಳುಹಿಸುವೆ, ಡ್ರೈವರ್ ಮತ್ತು ಕಂಡೆಕ್ಟರ್ ಸಂಬಳ ನಾನೇ ಕೊಡುತ್ತೇನೆ ಎಂದರು.

ನನ್ನ ಬಹಳ ಹತ್ತಿರದ 7-8 ಮನೆಗೆ ಮಾತ್ರ ಹೋಗಿ ಮೌಖಿಕ ಆಮಂತ್ರಣ ನೀಡಿದೆ. ನನ್ನ ಗೆಳೆಯರ ಸಂಖ್ಯೆ ಬಹು ದೊಡ್ಡದು ಹಾಗಾಗಿ ಯಾರನ್ನೂ ಆಮಂತ್ರಿಸಲಿಲ್ಲ ಕಾರಣ ಹೆಣ್ಣಿನ ಕಡೆಯವರಿಗೆ ಕಷ್ಟ ಆಗಬಾರದೆಂಬ ಉದ್ದೇಶದಿಂದ. ನನ್ನ ನಿಖಾ 31 ಮೇ 2004 ಸಂಜೆ 4 ಗಂಟೆಗೆಂದು ನಿಗದಿಯಾಗಿತ್ತು. ಆದ್ದರಿಂದ ನನ್ನ ಮದುವೆಯ ದಿವಸ ನನ್ನೂರಿನಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದೆ.1:30ಕ್ಕೆ ಸೆಮಿ ಪೈನಲ್ ಪಂದ್ಯ ಸೋತು ಬಂದೆವು. ಇನ್ನು ಮದುವೆಯ ದಿನವೇ ಕ್ರಿಕೆಟ್ ಆಡಲು ಹೋದ ವಿಚಾರ ತಾಯಿಗೆ ತಿಳಿದರೆ ಪಜೀತಿ ಎಂದು ಹಸಿವು ತಾಳಲಾರದೆ ತುಂಬಾ ಆತ್ಮೀಯರಾದ ನನ್ನ ನೆರೆಮನೆಯವರು, ಅವರ ಮುಂದಿನ ದ್ವಾರದಲ್ಲಿ ಬೀಡಿ ಕಟ್ಟುತ್ತಿದ್ದುದನ್ನು ನೋಡಿ ಇದೇ ಅವಕಾಶವೆಂದು ಅವರ ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿ ಅಡುಗೆ ಮನೆಯಲ್ಲಿದ್ದ ಗಂಜಿ ಮತ್ತು ಬಂಗುಡೆ ಪ್ರೈ ಕದ್ದು ತಿಂದು ಅವರ ಮುಂಬಾಗಿಲಲ್ಲೆ ಹೊರಗೆ ಬಂದೆ. ಅದಕ್ಕೆ ಆ ಹೆಂಗಸು ಏನೋ ಹಿಂಬಾಗಿಲಿನಿಂದ ಏಕೋ ಬಂದೆ ನಿನ್ನ ಮದ್ವೆ ಅಲ್ವೇನೊ ಇವತ್ತು ಗಂಟೆ ಈಗಲೇ ೨:೦೦ ಆಯಿತು ಎಂದು ಪ್ರಶ್ನಿಸಲಾರಂಭಿಸಿದರು, "ಹೌದು ಇನ್ನು 2 ಗಂಟೆಯೊಳಗೆ ನನ್ನ ನಿಖಾ.ಹಸಿವು ತಾಳಲಾರದೆ ನಿಮ್ಮ ಅಡುಗೆ ಮನೆಯಲ್ಲಿದ್ದ ಗಂಜಿ ಮತ್ತು ಬಂಗುಡೆ ಪ್ರೈ ಕದ್ದು ತಿಂದೆ ದಯವಿಟ್ಟು ಕ್ಷಮಿಸಿ ಈ ಹೊತ್ತಿನಲ್ಲಿ ತಾಯಿಯ ಹತ್ತಿರ ಅನ್ನ ಹಾಕಲು ಹೇಳುವಂಗಿಲ್ಲ" ಅಂತ ನಾನು ಹಾಸ್ಯಭರಿತವಾಗಿ ಹೇಳಿದೆ. ಅಲ್ಲಿಂದ ಮನೆಗೆ ಬಂದವನೇ ಮನೆಯನ್ನೊಮ್ಮೆ ಸೂಕ್ಷ್ಮವಾಗಿ ದಿಟ್ಟಿಸಿದೆ, ನನ್ನ ಮನೆ ಒಂದು "ಮದುವೆ ಮನೆ" ಅಂತ ಯಾರೂ ಹೇಳಲು ಸಾದ್ಯವಿಲ್ಲದಂತಿತ್ತು. ನನ್ನ ತಾಯಿ ತಂದೆ ತಮ್ಮಂದಿರು ನಿಖಾಹ್ ಗೆ ಹೋಗಲು ರೆಡಿಯಾಗುತ್ತಿದ್ದರು. ಮನೆಯಲ್ಲಿ ಕೇವಲ ಲೆಕ್ಕದ 7 ಮಂದಿ ಸಂಬಂದಿಕರು ಮದುವೆಗೆ ಬಂದಿದ್ದರು. ನಾನು ಬಾಡಿಗೆಯ್ ಸೂಟ್ ಧರಿಸಿ ರೆಡಿಯಾದೆ. ಮದುವೆಗೆ ಹೋಗಲು ಬಸ್ಸು ಮತ್ತು ನನ್ನ ಗೆಳೆಯನು ಓಮ್ನಿ ಬಂದು ನಿಂತಿತ್ತು. ಬಸ್ಸಲ್ಲಿ ಎಲ್ಲರೂ ಹತ್ತಿ ಕುಳಿತರು ಮಕ್ಕಳಿಂದ ಹಿಡಿದು ವಯಸ್ಸಾದವರು ಸೇರಿ ಒಟ್ಟು 16ರಷ್ಟು ಮಂದಿಯಿದ್ದರು. ಹೊರಡು ಮಗನೆ 16 ಜನರಲ್ಲ 10 ಮಂದಿ ಇದ್ದರೂ ಸಾಕು ನಿಖಾಹ್ ಗೆ ತಡ ಮಾಡುವುದು ಬೇಡ ಅಂತ ತಾಯಿ ಅವಸರದಿಂದಲೇ ಬಸ್ಸು ಹತ್ತಿದರು .

ನನ್ನ ಮನೆಯಿಂದ ಪೇಟೆಗೆ ಒಂದು ಕಿಲೋಮೀಟರ್ ದೂರ ಇದೆ. ನಾನು ಓಮ್ನಿ ಏರಿ ಪೇಟೆಗೆ ಹೋಗಿ ಬಸ್ ಬರುವುದನ್ನೇ ಕಾಯುತ್ತಿದ್ದೆ. ಆ ಸಮಯದಲ್ಲಿ ಮೊಬೈಲ್ ಕೂಡ ಅಪರೂಪ. ಅರ್ಧ ಗಂಟೆ ಕಳೆದರೂ ಬಸ್ ಬಾರದ್ದನ್ನು ಕಂಡು ನೋಡಿ ಬರುವಾ ಎಂದು ವಾಪಸ್ಸಾಗುವ ಹೊತ್ತಿಗೆ ದೂರದಿಂದ ಬಸ್ ಓವರ್ ಲೋಡ್ ಆಗಿ ವಾಲಿಕೊಂಡು ಬರುತ್ತಿತ್ತು. ವಿಷಯ ಏನೆಂದರೆ "ಏ ಅವನ ಮದ್ವೆ ಅಲ್ಲವಾ ಆಮಂತ್ರಣ ಇಲ್ಲದಿದ್ದರೂ ಪರವಾಗಿಲ್ಲ ನಾವೂ ಬರುತ್ತೇವೆಂದು ಕ್ರಿಕೆಟ್ ಆಡುತ್ತಿದ್ದ ಹುಡುಗರು ಬಸ್ಸೇರಿ ಬಂದಿದ್ದರು. ಬಸ್ ನಲ್ಲಿ ಜಾಗವಿಲ್ಲದ ಕಾರಣ 16 ಬೈಕಿನಲ್ಲಿ 32 ಜನ, ಬೈಕ್ ಸಿಗದ 15ರಿಂದ 20 ಜನರು ಟ್ಯಾಕ್ಸಿ ಮಾಡಿ ಬಂದಿದ್ದರು. ಮಸೀದಿಯಲ್ಲಿ ನಿಖಾ ಕ್ಲಪ್ತ ಸಮಯಕ್ಕೆ ಮುಗಿಯಿತು. ಎಲ್ಲರಿಗೂ ಲಿಂಬೆ ಹಣ್ಣಿನ ಸರ್ಬತ್ತು ಮತ್ತು ಲಡ್ಡು ವಿತರಿಸಲಾಯಿತು. ಮಸೀದಿಯಿಂದ ಮದು ಮಗಳ ಮನೆಗೆ ಹೋಗುವಾಗ ಇಡೀ ಊರೇ ಆಶ್ಚರ್ಯಚಕಿತವಾಗಿ ನೋಡುತ್ತಿತ್ತು ಏಕೆಂದರೆ ಅಲ್ಲಿ ನನ್ನ ಕಡೆಯಿಂದ ಸುಮಾರು 150 ಜನ ಬಂದಿದ್ದರು, 150 ರಲ್ಲಿ 7 ರಿಂದ 8 ಜನ ಮಾತ್ರ ಮಧ್ಯ ವಯಸ್ಕರು,ಬಾಕಿಯೆಲ್ಲ ನನ್ನ ಪ್ರಾಯದ ಮತ್ತು ನನಗಿಂತ ಸಣ್ಣ ಪ್ರಾಯದ ಹುಡುಗರು. ಅಲ್ಲಿ ಒಬ್ಬರು ಕೇಳಿಯೇ ಬಿಟ್ಟರು ನಿಮ್ಮ ಊರಿನಲ್ಲಿ ವಯಸ್ಸಾದವರು ಯಾರೂ ಇಲ್ವೆ..? ಎಲ್ಲಾ ಯುವಕರೇ ಇರುವುದಾ... ಎಂದು. ನಾನು ನಸು ನಕ್ಕು ಮುಂದೆ ಸಾಗಿದೆ. ಮಳೆಯ ಕಾರಣ ಇನ್ನಷ್ಟು ಗೆಳೆಯರು ಬರಲಾಗಲಿಲ್ಲ ಎಂದು ಬೇಸರದಿಂದ ಸಂದೇಶ ಕಲಿಸಿದ್ದರು.

ಮರುದಿನ ವಲಿಮಾ ಕಾರ್ಯಕ್ರಮ. ನನ್ನ ಹತ್ತಿರದ ಕೆಲವೇ ಕೆಲವು ಸಂಬಂದಿಕರನ್ನು ಆಹ್ವಾನಿಸಿದ್ದೆ. ನೆರೆಮನೆಯಿಂದ ಒಬ್ಬರನ್ನು ಹಾಗು ಅತೀ ಆತ್ಮೀಯ ಸ್ನೇಹಿತರನ್ನು ಕರೆದಿದ್ದೆ. ಒಟ್ಟಾಗಿ ಸುಮಾರು 70 ರಿಂದ 80 ಜನರಿದ್ದರು. ಅಕ್ಕಪಕ್ಕದ ಮನೆಯಿಂದ ಕುರ್ಚಿ ಟೇಬಲನ್ನು ಕೇಳಿ ತಂದಿದ್ದೆ. ನನ್ನ ಬೆಡ್ ರೂಮ್ಗೆ ನೆರೆಮನೆಯವರ ಪಲ್ಲಂಗವನ್ನು ಒಂದು ವಾರದ ಮಟ್ಟಿಗೆ ಕೇಳಿ ತಂದಿದ್ದೆ. ಪಾತ್ರೆ ಪಗಡೆಯ ಇಬ್ರಾಹಿಂ ಸಾಹೇಬರೂ ಕೂಡ ಪಾತ್ರೆಗಳಲ್ಲಿ ಭಾರೀ ಕಡಿತ ಮಾಡಿದ್ದರು. ಊಟ ಉಪಾಹಾರಗಳನ್ನು ತಯಾರಿಸಿದ ಪಕ್ವಾನ್ ಆದಂ ಸಾಹೇಬರೂ ಕೂಡ 2500 ರೂಪಾಯಿಯ ಬದಲಿಗೆ ಕೇವಲ 500 ರೂಪಾಯಿಯನ್ನು ತನ್ನ ಕೆಲಸಕ್ಕೆ ಪಡೆದಿದ್ದರು. ಒಟ್ಟಾರೆಯಾಗಿ ನನ್ನ ಈ ನಿರ್ಧಾರಕ್ಕೆ ಎಲ್ಲಾ ಸಹ್ರದಯಿಗಳು ಕೈ ಜೋಡಿಸಿದ್ದರು.

ಇನ್ನೊಂದು ಮುಖ್ಯವಾದ ವಿಚಾರ ಅವತ್ತು ಹುಡುಗಿ ನೋಡುವ ಮೊದಲು ಯಾಸೀರ್ ನನ್ನ ಕೈಗೆ ಹುಡುಗಿಯ ಪೋಟೊ ಇರುವ ಕವರ್ ಕೊಟ್ಟಾಗ ಆ ಕವರನ್ನು ತೆರೆಯದೆ ಅದೇ ರೀತಿ ಆಫೀಸಿನ ಪುಸ್ತಕಗಳ ಮಧ್ಯೆ ಬಚ್ಚಿಟ್ಟಿದ್ದೆ, ಪೋಟೊ ನೋಡಿ ಮನಸ್ಸು ಬದಲಾಗಿ ನನ್ನ ಆತ್ಮೀಯ ಗೆಳೆಯನಿಗೆ ಕೊಟ್ಟ ಮಾತು ತಪ್ಪಬಾರದೆಂಬ ಉದ್ದೇಶದಿಂದ. ಆ ಕವರನ್ನು ನಾನು ಮತ್ತು ನನ್ನ ಹೆಂಡತಿ ಮದುವೆಯಾದ 15 ದಿವಸಗಳ ನಂತರ ಆಫೀಸ್ ಗೆ ಹೋಗಿ ಒಟ್ಟಿಗೆ ತೆರೆದು ನೋಡಿದೆವು(ನಂಬಿದ್ರೆ ನಂಬಿ ಬಿಟ್ರೆ ಬಿಡಿ) ತದ ನಂತರ ನನ್ನನ್ನು ನೋಡಿ ನನ್ನ ನಾಲ್ಕು ಗೆಳೆಯರೂ ಸಹ ಇದೇ ರೀತಿಯಲ್ಲಿ ಮದುವೆಯಾಗುವುದಾಗಿ ಮಾತು ಕೊಟ್ಟು, ನುಡಿದಂತೆ ನಡೆದುಕೊಂಡರು. ನನ್ನ ಮದುವೆಗೆ ಆದ ಒಟ್ಟು ಖರ್ಚು ಕೇವಲ 38000 ಮಾತ್ರ.

"ಸೃಷ್ಟಿಕರ್ತನಿಗೆ ಸರ್ವ ಸ್ತೋತ್ರಗಳು"

ಇಂತೀ
ಅನಾಮಿಕ


www.facebook.com/BlueWavesPage
 

ದೀನಾರ್

****** ಅವಕಾಶಗಳು ಕಾಯುತಿವೆ ******

ಬಡವನಾಗಿ ಹುಟ್ಟಿದ್ದು ನಿನ್ನ ತಪ್ಪಲ್ಲ ಆದರೆ ಬಡವನಾಗಿ ಸತ್ತರೆ ಅದು ಖಂಡಿತಾ ನಿನ್ನದೇ ತಪ್ಪು.. ಈ ಮಾತನ್ನು ಹೇಳಿದವರು ಜಗತ್ತಿನ ಅತಿದೊಡ್ಡ ಶ್ರೀಮಂತ ಬಿಲ್ ಗೆಟ್ಸ್ ಅವರು.

ನಾವು ಚಿಕ್ಕಂದಿನಿಂದಲೇ ಹೆಳುತ್ತಾ ಬರುವ ಮಾತೊಂದಿದೆ ನಮ್ಮ ಅಪ್ಪ ಶ್ರೀಮಂತನಾಗಿದ್ದರೆ ನಂಗೆ ಈ ಸ್ಥಿತಿ ಬರುತ್ತಿರಲಿಲ್ಲ ಅಂತ..ಕೆಲವೊಮ್ಮೆ ನೆರೆಮನೆಯ ಶ್ರೀಮಂತನ ನೋಡಿ ಮನದಲ್ಲೇ ಹೇಳುದಿದೆ ಶ್..... ನಾನು ಅವರ ಮಗನಾಗಿ ಹುಟ್ಟಿದ್ದರೆ...!! ದಾರಿಯಲ್ಲಿ ಹೊಗುವಾಗ ಊರಿನ ಶ್ರೀಮಂತ ತನ್ನ ಬೆನ್ಸ್ ಕಾರಲ್ಲಿ ನಮ್ಮ ದಾಟಿ ಹೊದಾಗ, ಕಾಲೇಜಿನಲ್ಲಿ ತನ್ನ ಸಹಪಾಠಿ ದುಬಾರಿ ಬೈಕಲ್ಲಿ style ಆಗಿ ಬಂದು ಹೀರೊ ಪೋಸು ನೀಡಿದಾಗ, ಹೀಗೆ ಹಲವಾರು ಕಡೆ ನಾವು ಯೋಚಿಸೂದು ತಂದೆ ಶ್ರೀಮಂತನಾಗಿದ್ದರೆ ? ಇನ್ನು ಸ್ವಲ್ಪ ವಾಸ್ತವತೆಗೆ ಬರೊನ ಇಂದು ನಾವು ಕೇಳಿದ ಇದೇ ಮಾತನ್ನು ನಮ್ಮ ಮುಖ ನೋಡಿ ನಾಳೆ ನಮ್ಮ ಮಕ್ಕಳು ಕೇಳಿದರೆ..? ನಾವು ಏನಂತ ಉತ್ತರ ನೀಡುದು...?

ನಿಜವಾಗಿ ಯೋಚಿಸಿದರೆ ಎಲ್ಲರಿಗೂ ಶ್ರೀಮಂತನಾಗಿ ಬದುಕಲು ಆಸೆ ಇದ್ದೇ ಇರುತ್ತವೆ ಹಾಗಂತ ತಂದೆ,ಅಜ್ಜ ಮಾಡಿದ ಆಸ್ತಿಯ ಇಟ್ಟುಕೊಂಡು ಶ್ರೀಮಂತಿಕೆ ಮೆರೆಯುದರಲ್ಲಿ ಅರ್ಥವಿಲ್ಲ..ಜಗತ್ತಿನ ಹೆಚ್ಚಿನ ಶ್ರೀಮಂತರ ಹಿಂದಿನ ಕತೆ ನೋಡಿದಾಗ ಅವರೆಲ್ಲರೂ ಅತೀ ಬಡತನದಿಂದ ಬಂದವರೆ.. ಆದರೆ ಅವರೆಲ್ಲ ಯೊಚಿಸಿದ್ದು ಸ್ವಂತ ಕಾಲ ಬಲದ ಶಕ್ತಿಯ ವಿನಹ ಇತರರ ಸಂಪತ್ತಿನ ಪುಕ್ಕಟೆ ಪಾಲುದಾರಿಕೆಯನ್ನಲ್ಲ.

ಖಂಡಿತ ನಾವು ಬಡವನಾಗಿ ಹುಟ್ಟಿರಬಹುದು ಅದಕ್ಕೆ ನಾವು ಜವಾಬ್ದಾರರಲ್ಲದಿದ್ದರೂ ಮಂದೆ ಅದೆಷ್ಟೋ ವರ್ಷಗಳ ಬದುಕಲ್ಲಿ ನಮಗೆ ಬೇಕಾದ ರೀತಿಯಲ್ಲಿ ಸಾಧನೆ ಮಾಡುವ ಅವಕಾಶಗಳು ಇದ್ದೇ ಇರುತ್ತವೆ... ತಂದೆ ಮಾಡಿದ ಆಸ್ತಿಯಲ್ಲಿ ಶ್ರೀಮಂತಿಕೆ ಮರೆಯುವ ಬಗ್ಗೆ ಹೇಳುವಾಗ ಒಂದು ಕತೆ ನೆನಪಿಗೆ ಬರುತ್ತದೆ ಅದೇನೆಂದರೆ...
ಒಮ್ಮೆ ಬಿಲ್ ಗೇಟ್ಸ್ ಅವರು ಒಂದು ಹೋಟೆಲಿಗೆ ಊಟ ಮಾಡಲ ಹೋಗುತ್ತಾರೆ ..

ಜಗತ್ತಿನ ಅತೀ ದೊಡ್ಡ ಶ್ರೀಮಂತ ಬಂದುದನ್ನು ಕಂಡು ಹೋಟೆಲ್ ಕೆಲಸದಾಳಿಗೆ ಖುಷಿಯೋ ಖುಷಿ, ಊಟ ಎಲ್ಲಾ ಮುಗಿಸಿ ಹೊರೆಡಲು ನಿಂತ ಬಿಲ್ ಗೇಟ್ಸ್ ಅವರ ಎದುರಿಗೆ ನಗುತ್ತಾ ನಿಂತಿರುವ ಕೆಲಸದಾಳ ಕಂಡು 100ಡಾಲರ್ ನೀಡುವನು ಇದನ್ನು ಕಂಡ ಕೆಲಸಾದಲು ಹೇಳುತ್ತಾನೆ ನಿಮ್ಮ ಮಗ ದಿನಾ ಇಲ್ಲಿಗೆ ಬಂದು ಹೋಗುವಾಗ 500ಡಾಲರ್ ನೀಡಿ ಹೋಗುವನು ನೀವು ಇಷ್ಟು ಜಿಪುಣ ಅಂತ ತಿಳಿದಿರಲಿಲ್ಲ ಅಂತ, ಇದನ್ನು ಕೇಳಿದ ಬಿಲ್ ಗೇಟ್ಸ್ ಅವರು ಸಮಾಧಾನದಿಂದ ನಗುತ್ತಾ ಹೇಳುತ್ತಾರೆ "ಅವನು ಜಗತ್ತಿನ ಅತಿದೊಡ್ಡ ಶ್ರೀಮಂತನ ಮಗ, ಆದರೆ ನಾನು ಒಬ್ಬ ಬಡ ಚಮ್ಮಾರನ ಮಗ ಅಂತ ".

ಇಲ್ಲಿ ನಾವು ತಿಳಿದುಕೊಳ್ಳಬೇಕಾದುದು ತಂದ ಮಾಡಿದ ಆಸ್ತಿಯಿಂದ ಮೆರೆಯುವ ಮಗನಿಗೆ ಹಣದ ಬೆಲೆ ತಿಳಿದಿರೂದಿಲ್ಲ ಅದೇ ಕಷ್ಟಪಟ್ಟು ಸ್ವಂತ ಬಲದಿಂದ ಮೇಲೆ ಬಂದವನಿಗೆ ಅದರ ಬೆಲೆಯ ಅರಿವಿರುತ್ತದೆ. ಇನ್ನು ನಾವು ಕೇವಲ ಅವರಾಗಿದ್ದರೆ, ಇವರಾಗಿದ್ದರೆ ಅಂತ ಚಿಂತೆ ಮಾಡಿ ಚಿತೆಯಾಗದೆ ನಾವು ನಮ್ಮ ಶಕ್ತಿಯ ಬಗ್ಗೆ,ತೆರೆದ ಆಕಾಶದಂತಿರುವ ಅವಕಾಶಗಳ ಬಗ್ಗೆ ಯೊಚಿಸೋಣ..ಯೋಚನೆಗಳನ್ನು ಯೊಜನೆಗೆ ಒಳಪಡಿಸೋಣ,ಅಲ್ಲಿಗೆ ಮಗಿಸದೆ ಯೋಜನೆಗಳ ಕಾರ್ಯರೂಪಕ್ಕೆ ಇಳಿಸೋಣ.

-ದೀನಾರ್

#great #opportunities #ahead

www.facebook.com/BlueWavesPage

ಬದುಕು -ಬೆಲೆ ಮತ್ತು ಬಲಿ



ಕಡು ಬಡ ಕುಟುಂಬದಿಂದ ಬಂದ ಬಡ ತಂದೆ ತಾಯಿ ಹಾಗು ರೋಗಗ್ರಸ್ತ ಅಜ್ಜಿಯೊಂದಿಗೆ ಜೀವಿಸುತಿದ್ದ, ಓದಿನಲ್ಲಿ ಚುರುಕಾಗಿದ್ದ, ಶಾಲಾ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ, ಗೆಳೆಯರೊಂದಿಗೆ ಅನ್ಯೋನ್ಯವಾಗಿದ್ದ, ಶಿಕ್ಷಕರ ಮೆಚ್ಚಿನ ವಿಧ್ಯಾರ್ಥಿಯಾಗಿದ್ದ, ಈಗಷ್ಟೇ ಯೌವ್ವನಕ್ಕೆ ಕಾಲಿಡುತ್ತಿದ್ದ ಹೈಸ್ಕೂಲ್ ವಿಧ್ಯಾರ್ಥಿ ಉತ್ತರ ಪ್ರದೇಶದ "ಗೋಪಾಲ್". ಇದ್ದಕಿದ್ದಂತೆ ನೇಣಿಗೆ ಶರಣಾದ. ಅವನ ಆತ್ಮಹತ್ಯೆಯ ಕಾರಣಗಳನ್ನು ಹುಡುಕುತ್ತಾ ಹೋದಾಗ, ಮನ ಕುಲುಕುವಂತಹ ಚಿತ್ರಗಳ ಅನಾವರಣವಾಗುತ್ತದೆ.

ತನ್ನ ಅಜ್ಜಿಯ ಔಷದಿಗೆ ಹಣವಿಲ್ಲದ ಚಿಂತೆಯನ್ನು ತನ್ನ ಆಪ್ತ ಮಿತ್ರನಾದ ಹರಿಯೊಂದಿಗೆ ಹಂಚಿಕೊಳ್ಳುತ್ತಾನೆ. ಹರಿಯು ಮಿತ್ರನಿಗೆ ಸಹಾಯ ಮಾಡಲೋಸುಗ, ತನ್ನ ಅಕ್ಕ 'ನೈನಾ'ಳ ದುಂಬಾಲು ಬೀಳುತ್ತಾನೆ. ಇಪ್ಪತ್ತೋ ಮೂವತ್ತೋ ರೂಪಾಯಿ ಆಗಿರಬಹುದು ಅಂದುಕೊಂಡು "ಇವತ್ತೇ ಸಂಬಳ ಸಿಕ್ಕಿದೆ, ಪರ್ಸಲ್ಲಿ ಇದೆ ತೆಗೆದುಕೋ" ." ಎಂದು ಉತ್ತರಿಸುತ್ತಾಳೆ. ಹರಿ ಅದರಿಂದ 1000 ರೂ ತೆಗೆದು ಗೋಪಾಲನಿಗೆ ಕೊಟ್ಟು ಸಮಾಧಾನ ಪಡಿಸಿ ಕಳುಹಿಸುತ್ತಾನೆ.

ನಂತರ ನೈನ ತನ್ನ ಪರ್ಸ್ನಿಂದ 1000 ರೂ ತೆಗೆದಿದುರುವುದನ್ನು ಕಂಡು ಗಾಬರಿಗೊಂಡು ವಿಚಾರಿಸಿದಾಗ, ಹರಿಯು ಒಪ್ಪಿಕೊಂಡು ವಿನಯಪೂರ್ವಕವಾಗಿ ಆದಷ್ಟು ಬೇಗ ಅವನು ಹಣವನ್ನು ಮರಳಿಸುತ್ತಾನೆ ಎಂದು ಪರಿಯಾಗಿ ಬೇಡಿಕೊಂಡರೂ, ಅದನ್ನು ಕಿವಿಗೊಲ್ಲದೆ ತಕ್ಷಣ ತನ್ನ ಹರಿದ ಚಪ್ಪಲಿಯೇರಿಸಿಕೊಂಡು ನೇರ ಗೋಪಾಲನ ಮನೆಗೆ ದೌಡಾಯಿಸಿ, ಈಗಲೇ ಹಣ ಕೊಡುವಂತೆ ದಬಾಯಿಸುತ್ತಾಳೆ. "ಔಷದ ಖರೀದಿಸಿ 1000 ರೂಪಾಯಿಯಲ್ಲಿ 127 ರೂಪಾಯಿಯಷ್ಟೇ ಉಳಿದಿದೆ, ಬಾಕಿ ಹಣ ಶೀಘ್ರದಲ್ಲಿ ಮರಳಿಸುವೆ" ಗೋಪಾಲ್ ಅವಳಲ್ಲಿ ವಿನಂತಿಸುತ್ತಾನೆ.

ಅದಕ್ಕವಳು ಕೆಂಡ ಮುಂಡಲವಾಗಿ "ನನ್ ಹಣ ರಾತ್ರಿ ಬೆಳಗಾಗೊದರೊಳಗೆ ನನ್ ಕೈ ಸೆರ್ಬೆಕು. ಇಲ್ಲಾಂದ್ರೆ, ನೀನು ನನ್ನನ್ನು ರೇಪ್ ಮಾಡಿ ಸಾವಿರ ಅಲ್ಲ ಹತ್ತು ಸಾವಿರ ದೊಚಿದ್ದಿ ಎಂದು ನೇರ ಪೋಲೀಸ್ ಕಂಪ್ಲೇಂಟ್ ಕೊಡ್ತೀನಿ. ನೀನಂತು 7 ವರ್ಷಕ್ಕೆ ಒಳಗೆ ಹೋಗ್ತೀಯ. ಹೊರ ಬಾರೋ ಹೊತ್ತಿಗೆ ನಿನ್ ಮನೆಯವರು ಅವಮಾನ ಸಹಿಸಿ ಜೀವಂತ ಇರುತ್ತಾರೋ ಇಲ್ವೋ ಹೇಳಕ್ಕಾಗದು" ಅಂತ ಒಂದಷ್ಟು ಕರುಣೆಯಿಲ್ಲದೆ ದಬಾಯಿಸುತ್ತಾಳೆ. ಮೊದಲೇ ತನ್ನ ಸಾಲು ಸಾಲು ಕಷ್ಟಗಳಿಂದ ನೊಂದಿದ್ದ ಗೋಪಾಲನನ್ನು ಈ ಮಾತು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸುತ್ತದೆ. ಪರಿಹಾರದ ಯಾವುದೇ ಮಾರ್ಗ ತೋಚದೆ ಜರ್ಜರಿತನಾಗುತ್ತಾನೆ. ಅಲ್ಲಿಂದ ಬಿಕ್ಕಿ ಬಿಕ್ಕಿ ಅಳುತ್ತ ನೇರ ಕೊಠಡಿ ಹೋದವನೇ ನೇಣಿಗೆ ಶರಣಾಗುತ್ತಾನೆ.

ಪೋಲೀಸ್ ವಿಚಾರಣೆ ವೇಳೆ ನೈನ ಹೇಳ್ತಾಳೆ, "ನಾನು ಆ ತರ ಹೇಳಿರೋದು ನಿಜ. ಆದ್ರೆ ಗೋಪಾಲ್ ಇಷ್ಟು ದೊಡ್ಡ ಅನಾಹುತ ಮಾಡ್ಕೊಳ್ತಾನೆ ಎಂದು ಯೋಚಿಸಿರಲಿಲ್ಲಾ. ನನಗೆ1000 ರುಪಾಯಿ ಬಹಳ ದೊಡ್ಡ ಮೊತ್ತ. ನನಗೆ 5000 ರುಪಾಯಿ ಸಂಬಳ. ಅದ್ರಲ್ಲಿ ತಿಂಗಳ ಮನೆ ಖರ್ಚು, ತಂದೆಯ ಔಷದಿ, ತಮ್ಮನ ವಿಧ್ಯಾಬ್ಯಾಸ, ನನ್ನ ಸಣ್ಣ ಪುಟ್ಟ ಖರ್ಚು. ಎಲ್ಲವೂ 5000 ರುಪಾಯಿಯಲ್ಲಿ ನಿಭಾಯಿಸಬೇಕು. 3 ದೀಪಾವಳಿಗಳು ನಮಗಾರಿಗೂ ಹೊಸ ಬಟ್ಟೆಯಿಲ್ಲದೆ ಕಳೆದು ಹೋಗಿದೆ. ನನ್ನಲ್ಲಿರುವುದು 2 ಜೊತೆ ಬಟ್ಟೆ ಮಾತ್ರ. ದಿನಾಲು ಒಗೆದು ಹಾಕ್ತೀನಿ. ಆ 1000 ರುಪಾಯಿಂದಾಗಿ ನನ್ನ ತಿಂಗಳ ಖರ್ಚಿನ ಲೆಕ್ಕಾಚಾರ ತಲೆ ಕೆಳಗಾಗುವ ಭಯ ಮತ್ತು ಚಿಂತೆ ನನ್ನನ್ನು ಕಾಡಿದಕ್ಕೊಸ್ಕರ ನಾನು ನನ್ನ ಹಣಕ್ಕಾಗಿ ಬೆದರಿಸಿದೆ. ಆದ್ರೆ ಇದರ ಪರಿಣಾಮ ಈ ರೀತಿ ಇರಬಹುದು ಎಂದು ಕನಸಿನಲ್ಲೂ ಎಣಿಸಿರಲಿಲ್ಲ" ಎಂದು ಗದ್ಗದಿತಳಾಗಿ ಮರುಗುತ್ತಾಳೆ.
ಈಗ ನೈನ ಜೈಲಿನಲ್ಲಿ ಭಾರವಾದ ಕಣ್ಣೀರಿನೊಂದಿಗೆ ದಿನ ಕಳೆಯುತ್ತಿದ್ದಾಳೆ. ಎರಡೂ ಬಡ ಕುಟುಂಬಗಳ ಸ್ಥಿತಿ ಡೋಲಾಯಮಾನವಾಗಿದೆ.

ಗೆಳೆಯರೇ, ಸಿನಿಮಾ ತಾರೆಯರಿಗೆ, ಫ್ಯಾಶನ್ ಲೋಕದ ಬಿಚ್ಚಮ್ಮಗಳಿಗೆ ಸಣ್ಣ ನೆಗಡಿ ಆದ್ರೂ ನೆಗೆದು ಬೀಳುವ ನಾವುಗಳು, FB ಪುಟಗಳಲ್ಲಿ ಹಂಚಿ ಕೊಳ್ತೆವೆ, ಮಾಧ್ಯಮಗಳಲ್ಲೂ ಚರ್ಚಿಸಲ್ಪಡುತ್ತದೆ

ಶ್ರೀಮಂತರು ತಮ್ಮ ಮಕ್ಕಳನ್ನು ಡಾಕ್ಟರುಗಳನ್ನಾಗಿ ಮಾಡಿ ವಿದೇಶಕ್ಕೆ ಕಳಿಸಿ ಬ್ಯಾಂಕ್ ಬ್ಯಾಲೆನ್ಸ್ ವೃದ್ದಿಸಿಕೊಳ್ತಾರೆ. ಮಲ್ಟಿ ಮಿಲಿಯನರ್ಗಳು, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ತೆರೆದು, ಮತ್ತೊಂದನ್ನು ಕಟ್ಟಿಸುವ ಕನಸು ಕಾಣುತ್ತಾರೆ. ಅದೇ ಆಸ್ಪತ್ರೆಯ ಪಕ್ಕದಲ್ಲಿ ಅದೆಷ್ಟೋ ಬಡ ಕುಟುಂಬಗಳು ಔಷದಿಗಾಗಿ ಪರದಾದುತ್ತಿರುತ್ತವೆ.

ನಮ್ಮ ಊರಿನಲ್ಲಿ ಯಾರಾದರು ಬಡವರು ಔಷದಿಗಾಗಿ ಪರಿತಪಿಸಿದರೆ, ನಾವು ಅವರತ್ತ ಹೆಜ್ಜೆ ಹಾಕುವುದು ಬಿಡಿ, ಮುಖ ಕೂಡ ತಿರುಗಿಸಿ ನೊಡಲ್ಲ. ಹಾಗೆ ನೋಡಿದರೆ ಎಲ್ಲಿ ನಮ್ಮ ಜೇಬಿಗೆ ಕತ್ತರಿ ಬೀಳುತ್ತೋ ಎಂಬ ಭಯ.

ಇವತ್ತು ಎಷ್ಟು ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆಯ ಯಜಮಾನರು ರೋಗಿಗಳಿಂದ ಗಳಿಸಿದ ಲಾಭಾಂಶದಲ್ಲಿ ಒಂದಂಶವನ್ನಾದರೂ ಮೀಸಲಿತಿದ್ದಾರೆ ? ಬೆಲೆ ಬಾಳುವ ಐಶಾರಾಮಿ ಕಾರುಗಳನ್ನು ಕಾಲ ಕಾಲಕ್ಕೆ ಬದಲಾಯಿಸುವ ಆಗರ್ಭ ಶ್ರೀಮಂತರು (ಕೆಲವರನ್ನು ಬಿಟ್ಟು) ಇದರ ಬಗ್ಗೆ ಕಾಳಜಿವಹುಸಿದ್ದಾರೆಯೇ?

ನಾವುಗಳು ಇದಕ್ಕಾಗಿ ಒಂದು ಹೆಜ್ಜೆ ಇಡೋಣವೇ? ಇಂಥಹ ನಿಜವಾದ ಬಡ ಜನರಿಗಾಗಿ ಕೈ ಜೋಡಿಸೋಣವೇ?

ನಿಮ್ಮ ಅಂತರಾಳದಲ್ಲಿ ಎಲ್ಲಾದರೂ "ಹೌದು" ಎಂಬ ಸಣ್ಣ ಒಂದು ದ್ವನಿ ಮೂಡಿದರೆ, ನಾವೆಲ್ಲಾ ಒಟ್ಟಾಗಿ ಇದಕ್ಕಾಗಿ ಕಾರ್ಯಪ್ರವೃತ್ತರಗೋಣ...

ಇತಿ ನಿಮ್ಮ
ಅನಾಮಿಕ...


https://www.facebook.com/BlueWavesPage

ಅಜ್ಞಾತ ಸಂತಸ



ಗೆಳೆಯರೇ.. ಕೆಲವೊಂದು ವಿಷಯಗಳು ನಮ್ಮ ಕಣ್ಣೆದುರು ಇದ್ದರೂ ನಮ್ಮ ಗಮನಕ್ಕೆ ಬಾರದಿರುತ್ತದೆ. ಅಂತಹದೇ ಘಟನೆ ಇವತ್ತು ನಡೆಯಿತು.

ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಶಾಲಾ ರಜಾ ದಿನಗಳನ್ನು ಕಳೆಯಲು ಮುರ್ಡೆಶ್ವರಕ್ಕೆ ಹೋಗಿದ್ದೆ. ಸಾಯಂಕಾಲ ಅಲ್ಲಿ ತಲುಪಿದ ನಾವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಹೋಟೆಲ್ನಲ್ಲಿ ತಂಗಿದ್ದೆವು. ಮುಂಜಾನೆ ಹೊತ್ತು ಬಾಲ್ಕನಿಯಲ್ಲಿ ಬೆಳಗ್ಗಿನ ಚಹಾ ಸವಿಯುತ್ತಿರುವಾಗ ಹೋಟೆಲಿನ ಗೇಟಿನ ಬಳಿ ಒಬ್ಳು ಹಣ್ಣು ಹಣ್ಣು ಮುದುಕಿ ಹೋಟೆಲಿನ ಗೇಟಿನ ಕಾಂಕ್ರೀಟ್ ಹಜಾರವನ್ನು ಗುಡಿಸುತ್ತಿದ್ದಳು. ಗುಡಿಸಿ ಮುಗಿದ ಕೂಡಲೇ, ಮತ್ತೊಂದು ವಾಹನ ತನ್ನ ಚಕ್ರದಲ್ಲಿ ತುಂಬಿಕೊಂಡಿದ್ದ ಮಣ್ಣನ್ನು ರಾಚಿ ಹೋಯ್ತು. ಆ ಮುದುಕಿ ತನ್ನ ಎಂದಿನ ಶ್ರದ್ದೆಯಿಂದ ಮತ್ತೆ ಮತ್ತೆ ಗುಡಿಸಿ ಮುಗುವಷ್ಟರಲ್ಲಿ ಮತ್ತೊಂದು ಕಾರು.. ಹೀಗೆ ಹಲವು ಬಾರಿ ಪುನರಾವರ್ತನೆ ಆದಾಗ ನನ್ನ ಮನಸ್ಸು ಮುಮ್ಮಲ ಮರುಗಿತು, ಅಸಹಾಯಕತೆಗಳು ದುರ್ಬಲರನ್ನೇ ಹೀಯಾಳಿಸುತ್ತವೆ ನೋಡಿ.. ಬಾಲ್ಕನಿಯಿಂದ ಇಳಿದು ಹೋಗಿ ಆ ಮುದುಕಿಯ ಕೈಗೆ 500 ರುಪಾಯಿ ನೋಟನ್ನು ಇಟ್ಟೆ. ಮುದುಕಿ ಸ್ಥಬ್ದವಾಗಿ ನಿಂತಳು. ಕ್ಷಣಾರ್ಧದಲ್ಲಿ ಕಣ್ಣಿಂದ ಜಾರಿ ಬಿದ್ದ ಹನಿಯೊಂದು ಅವಳ ಸುಕ್ಕು ಗಲ್ಲವನ್ನು ತೇವಗೊಳಿಸಿತು. ಅವಳ ಕಣ್ಣ ಹನಿಗಳು ಹೇಳಿದ ಕಥೆಗಳನ್ನು ನನ್ನಕ್ಷರಗಳು ಕಟ್ಟಿಕೊಡಲು ಸೋಲುತ್ತವೆ ಬಿಡಿ.

ಅಲ್ಲಿಂದು ಮತ್ತೆ ಹೋಟೆಲಿಗೆ ಪ್ರವೇಶಿಸುವಾಗ ದ್ವಾರದಲ್ಲೇ ಇದ್ದ ಹೋಟೆಲಿನ ಉಪಾಹಾರ ಗೃಹಕ್ಕೆ ಇನ್ನೊಂದು ಸ್ಟ್ರಾಂಗ್ ಚಾ ಕುಡಿಯಲು ಹೋದೆ, ಅಲ್ಲೊಬ್ಬ ಮುದುಕ ಉಪಹಾರ ಮಾಡಿ ಹೋದವರ ಎಂಜಲು ಪಾತ್ರವನ್ನು ಎತ್ತುತ್ತಾ, ಟೇಬಲನ್ನು ಸ್ವಚಗೊಳಿಸುತ್ತಾ ಮೌನವಾಗಿ ತನ್ನ ಕೆಲಸದಲ್ಲಿ ತಲ್ಲೀನನಾಗಿದ್ದ. ತುಂಬಾ ಯಾಂತ್ರಿಕವಾಗಿದ್ದಂತಿದ್ದ ಅವನ ಕೆಲಸದ ನಡುವೆ ಲೋಕದ ಪರಿವೆಯೇ ಅವನಿಗಿಲ್ಲದಂತಿತ್ತು ಅವನ ಮುಖ ಭಾವ. ನನಗೆ ಅವನ ಮುಖದ ತೀವ್ರ ಮೌನ ಸಹಿಸಲಾಗಲಿಲ್ಲ. ಅವನ ಕೈಗೆ 500 ರುಪಾಯಿ ನೋಟು ಇಡುವಾಗ ನನಗೂ ಮಾತು ಹೊರಡಲಿಲ್ಲ, ಅವನಿಗೂ ಮಾತು ಹೊರಡಲಿಲ್ಲ. ಮತ್ತೊಂದು ಕೈಯಲ್ಲಿ ಎತ್ತಿದ್ದ ಎಂಜಲು ಪ್ಲೇಟನ್ನು ಅಲ್ಲೇ ಬಿಟ್ಟು ದರದರನೆ ವಾಶ್ ರೂಂ ಕಡೆಗೆ ಓಡಿಹೋದ. ಸ್ವಲ್ಪ ಸಮಯದಲ್ಲಿ ಹೊರ ಬಂದ ಅವನ ಕಣ್ಣುಗಳು ಕೆಂಪಾಗಿದ್ದವು. ಅತ್ತು ಮುಖ ತೊಳೆದು ಬಂದಿದ್ದಾನೆ ಅಂತ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. "ದೇವರಿದ್ದಾನೆ ಎಂಬುದು ಸುಳ್ಳಲ್ಲ, ನನ್ನ ಮಗನಿಗೆ ಮೈ ಹುಷಾರಿಲ್ಲ, ಆಸ್ಪತ್ರೆಗೆ ಹೋಗಲು ಹಣ ಇಲ್ಲದೆ ಅದೇ ಚಿಂತೆಯಲ್ಲಿದ್ದೆ, ಆ ದೇವರೇ ನಿಮ್ಮನ್ನು ಕಳುಹಿಸಿದ್ದು...." ಎನ್ನುತ್ತಿದ್ದವನ ಕಣ್ಣುಗಳು ಮತ್ತೂ ಹನಿಗೂಡಿದ್ದು ನನ್ನೆದೆ ನಡುಗಿಸಿತು. ಅವನ ಸ್ವರದಲ್ಲಿದ್ದ ಕಂಪನಗಳು ನನ್ನೊಳಗೂ ಹುಟ್ಟಿ ದುಃಖ ಮಿಡಿಯುತ್ತಿವೆ. ಸುಮ್ಮನೆ ಹೇಳುತ್ತಾರೆಯೇ, 'ದುಃಖವೆಂಬುದು ಸಾಮೂಹಿಕ ಸಮ್ಮೋಹಿನಿ' ಎಂದು.

ಅಲ್ಲಿಂದ ಭಾರವಾದ ಹೆಜ್ಜೆಗಳೊಂದಿಗೆ ರೂಮಿಗೆ ನಡೆದೆ. ನನ್ನ ರೂಮಿನ ಕಾರಿಡಾರನ್ನು ಸ್ವಚ್ಚಗೊಳಿಸುತ್ತಿದ್ದ 3 ಮಹಿಳೆಯರು ಎದುರಾದರು. ಅವರಿಗೂ ಏನಾದರು ಕೊಡುವ ಮನಸ್ಸಾಯಿತು. ಸಾವಿರ ರುಪಾಯಿ ನೋಟನ್ನು ಒಬ್ಬಳ ಕೈಗಿತ್ತು ನೀವು ಹಂಚಿಕೊಳ್ಳಿ ಎಂದು ಹೇಳಿ ನನ್ನ ರೂಮಿನೊಳ ಹೊಕ್ಕೆ.

ಹತ್ತು ನಿಮಿಷದ ನಂತರ ಏನೋ ಕೆಲಸದ ತರುವಾಯ ರೂಮಿಂದ ಹೊರಬಂದಾಗ ಬಾಗಿಲ ಬಳಿ ಆ ಮೂವರು ಮಹಿಳೆಯರು ಕಾಯುತ್ತಾ ನಿಂತಿದ್ದರು. ಏನಾಯ್ತು ಅಂತ ವಿಚಾರಿಸಿದಾಗ ಒಬ್ಬಳು ಮೆಲುದನಿಯಲ್ಲಿ ನಯವಾಗಿ ಹೇಳಿದಳು "ಸಾರ್ ನಾವು ಒಟ್ಟು ಹತ್ತು ಮಂದಿ ಇದ್ದೇವೆ, ಎಲ್ಲರಿಗೂ ಕೊಡಬೇಕಾ?". ನಾನು ಇನ್ನೊಂದು ಸಾವಿರವನ್ನು ಅವರ ಕೈಗಿಟ್ಟು ಎಲ್ಲರೂ ಹಂಚಿಕೊಳ್ಳಿ ಎಂದು ಹೇಳಿ ನನ್ನ ಕಾರಿನತ್ತ ಹೊರಟೆ.

ನನ್ನ ಕೆಲಸವನ್ನೆಲ್ಲಾ ಮುಗಿಸಿ ಮತ್ತೆ ಹೋಟೆಲಿಗೆ ಹಿಂದಿರುಗುವಾಗ ಆ ಮಹಿಳೆಯರ ಪೈಕಿ ಮಧ್ಯವಯಸ್ಸಿನ ಒಬ್ಬಳು ನಾನು ಬರುವುದನ್ನೇ ಕಾಯುತ್ತಾ ರೂಮಿನ ಪಕ್ಕ ನಿಂತಿದ್ದಳು.
ನನ್ನನ್ನು ಕಂಡದ್ದೇ ತಡ, ಓಡಿಬಂದು "ಸಾರ್ ನಿಮ್ಮಲ್ಲಿ ಸ್ವಲ್ಪ ಮಾತಾಡ್ಬೇಕು" ಅಂತ ಕಾರಿಡಾರಿನ ಮೂಲೆಗೆ ಕರೆದಳು. "ಹೇಳಿ ಅಕ್ಕಾ .... " ಅಂದೆ. "ಸಾರ್ ನಾನು ಬಹಳ ಕಷ್ಟದಲ್ಲಿದ್ದೇನೆ.. ನನಗೆ 6 ಮತ್ತು 8 ವರ್ಷದ ಇಬ್ರು ಮಕ್ಕಳಿದ್ದಾರೆ, ನನ್ನ ಗಂಡ ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ, ಅದಕ್ಕೆ ಇಲ್ಲಿ ರೂಂ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದೇನೆ.. ಏನಾದರೂ ಸಹಾಯ ಮಾಡಿ." ಅಂತ ಒಂದೇ ಉಸಿರಿಗೆ ಹೇಳಿ ಮೌನವಾದಳು. ಮತ್ತೆ ಒಂದು ಸಾವಿರವನ್ನು ಅವರ ಕೈಗಿಟ್ಟೆ., ಥಟ್ಟನೆ ಅವರು ನನ್ನ ಕಾಲಿಗೆ ಬಿದ್ದರು. ನಾನು ಹೌಹಾರಿ ಹಿಂದೆ ಸರಿದು ಹೇಳಿದೆ"... ಅಕ್ಕಾ ನಾನೋರ್ವ ಮುಸ್ಲಿಂ.. ಯಾರ ಕಾಲಿಗೂ ಬೀಳುವುದಿಲ್ಲ , ಯಾರನ್ನೂ ನನ್ನ ಕಾಲಿಗೆ ಬೀಳಲು ಬಿಡುವುದಿಲ್ಲ.. ಏನಾದ್ರೂ ಮಾಡಬೇಕೆಂದಿದ್ದರೆ ನನಗೆ ಆಶೀರ್ವಾದ ಮಾಡಿ.." ಆ ಹೆಂಗಸಿನ ಕಣ್ಣು ತುಂಬಿ ಬಂದಿತ್ತು. "ಇಲ್ಲಿ ಎಷ್ಟೋ ಜನ ಬರುತ್ತಾರೆ, ಹೋಗುತ್ತಾರೆ, ರೂಂ ಬಾಯ್ಸ್ ಮತ್ತು ವೈಟರ್ಸಿಗೆ ಟಿಪ್ಸ್ ಕೊಡುತ್ತಾರೆ, ನಮ್ಮಂತ ಕ್ಲೀನರ್ಸ್ಗೆ ಏನಾದರು ಕೊಟ್ಟದ್ದು ನೀವೇ ಮೊದಲು, ನಿಮಗೆ ದೇವರು ಒಳ್ಳೆಯದು ಮಾಡಲಿ" ಅಂತ ಕಣ್ಣೀರಿಟ್ಟಳು. ಅವರನ್ನು ಸಮಾಧಾನಪಡಿಸಿ ರೂಮಿಗೆ ತೆರಳಿದೆ.

ರೂಮಿಗೆ ಬಂದು ಹೆಂಡತಿ ಹತ್ರ ನಡೆದ ಘಟನೆಗಳನ್ನೆಲ್ಲಾ ವಿವರಿಸಿದೆ. "ಆ ಹೆಂಗಸಿನ ವಿಳಾಸ ಪಡೆಯಿರಿ, ನಾವು ಒಂದು ದಿನ ಹೋಗಿ ಬರೋಣ, ಸಾದ್ಯವಾದರೆ ಒಂದು ತಿಂಗಳ ದಿನಸಿಯನ್ನಾದರೂ ಅವರ ಮನೆಗೆ ತಲುಪಿಸೋಣ..." ಅವಳು ಮರುಕಪಟ್ಟು ಹೇಳಿದಳು.

ಈ ಘಟನೆಯನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದು ನಾನು ಮಾಡಿದ್ದು ಮಹಾ ಪುಣ್ಯ ಅಂತಲೋ, ನಾನು ಕೊಡುಗೈ ದಾನಿ ಅಂತ ತಿಳಿಸಲೋ ಖಂಡಿತಾ ಅಲ್ಲ ಗೆಳೆಯರೇ.. ನಾನ್ಯಾರೆಂದು ತಿಳಿಸುವ ಗೋಜಿಗೂ ನಾನು ಹೋಗುವುದಿಲ್ಲ. ಆದರೆ ನನ್ನ ಈ ಬರಹ, ಈ ಘಟನೆ ನಿಮ್ಮಲ್ಲೊಂದು ಸೂಕ್ಷ ಸಂವೇದನೆಯನ್ನು ಮೂಡಿಸಿದರೆ, ತಮ್ಮೊಳಗೊಂದು ಸ್ಪೂರ್ತಿಯ ಕಿಡಿಯನ್ನು ತುಂಬಿದರೆ ಈ ಬರಹ ಸಾರ್ಥಕ.

ನಾವು ಕುಟುಂಬ ಸಮೇತರಾಗಿ ದೂರದೂರಿಗೆ ತಿರುಗಾಡಲು ಹೋದಾಗ ನಮ್ಮವರ ಪ್ರತಿಯೊಂದು ಬೇಡಿಕೆಗಳನ್ನು ಪೂರೈಸುತ್ತೇವೆ. ಆರಾಮದಾಯಕ ಹೋಟೆಲ್ಗಳು, ಬಗೆ ಬಗೆಯ ದುಬಾರಿ ತಿನಿಸುಗಳು, ಮನರಂಜನಾ ಆಟಗಳು ಹೇಗೆ ಎಲ್ಲವನ್ನೂ... ನಮ್ಮ ಗ್ರೇಡನ್ನು ತೋರಿಸಲು ರೂಂ ಬೋಯ್ಸ್ಗೆ, ವೈಟರ್ಸ್ಗೆ ಟಿಪ್ಸ್ ಕೊಡುತ್ತೇವೆ.. ಆದರೆ ಇಂಥಹ ಕಸ ಗುಡಿಸುವವರನ್ನು, ಟೇಬಲ್ ಒರೆಸುವವರನ್ನೂ, ಹೌಸ್ ಕೀಪಿಂಗ್ ಕೆಲಸದವರನ್ನೂ ಕಂಡೂ ಕಾಣದಂತೆ ಮಾಡುತ್ತೇವೆ. ಒಪ್ಪತ್ತಿನ ಊಟಕ್ಕೆ, ಸಂಸಾರ ನಿರ್ವಹಣೆಗೆ ಕಷ್ಟಪಡುವ ಅವರನ್ನು ನಾವು ಗಮನಿಸುವುದೇ ಇಲ್ಲ. ಅವರ ಕಷ್ಟ ಕಾರ್ಪಣ್ಯಗಳನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ನಮ್ಮ ಐಶಾರಾಮಿ ಜೀವನದ ದಿನದ ಖರ್ಚಿನ ಒಂದಂಶ ಅವರಿಗೆ ಕೊಟ್ರೆ ಮರುಭೂಮಿಯಲ್ಲಿ ಒಂದು ಹನಿ ನೀರು ಸಿಕ್ಕಷ್ಟು ಸಂತಸಪಡುತ್ತಾರೆ.

ನಾವು ತಿಳಿದೂ ತಿಳಿಯದೆಯೂ ಅದೆಷ್ಟೋ ಹಣವನ್ನು ಪೋಲು ಮಾಡುತ್ತೇವೆ. ಅದರಲ್ಲಿ ಒಂದಂಶವನ್ನು ಇಂತಹವರಿಗೆ ನೀಡಿ ಅವರ ಕಷ್ಟದಲ್ಲಿ ಭಾಗಿಯಾದರೆ ನಮ್ಮ ಆ ದಿನ ಸಾರ್ಥಕ. ನಮ್ಮೊಳಗೇ ಅನೂಹ್ಯ ಸಂತಸಕ್ಕೆ ಅದು ಕಾರಣವಾಗುತ್ತದೆ. ಬನ್ನಿ ಗೆಳೆಯರೇ ಇಂಥಹ ಸಣ್ಣ ಪುಟ್ಟ ಬದಲಾವಣೆಯನ್ನು ನಮ್ಮ ಜೀವನದಲ್ಲಿ ತರೋಣ. ಮನುಷ್ಯ ಮನಸ್ಸು ಮನಸ್ಸುಗಳ ಸ್ನೇಹ ಸೇತುಗೆ ಅದು ಕಾರಣವಾಗಬಹುದು. ಕಷ್ಟದಲ್ಲಿರುವವನ ಮುಖದಲ್ಲಿ ಸಣ್ಣದೊಂದು ಸಂತಸದ ಮುಗುಳ್ನಗು ತರುವುದು ನಮ್ಮಿಂದ ಸಾಧ್ಯವಾದರೆ ಅದನ್ನು ಮೀರಿಸುವ ವಸ್ತು ಈ ಲೋಕದಲ್ಲಿ ಇರುವುದಾದರೂ ಏನು...?

ಏನಂತೀರಿ ಗೆಳೆಯರೇ...?

ಇತೀ ನಿಮ್ಮವನೇ,
ಅನಾಮಿಕ

www.facebook.com/BlueWavesPag